ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಖ್ಯಾತ ನಟ, ನಿರ್ದೇಶಕ ಹಾಗು ನಿರ್ಮಾಪಕ ದ್ವಾರಕೀಶ್ ಚಿತ್ರರಂಗದಲ್ಲಿ ಸಲ್ಲಿಸಿದ ಅಪಾರ ಸೇವೆ ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.
ಇಂದು ನಡೆದ ಘಟಿಕೋತ್ಸವದಲ್ಲಿ ನಟ ದ್ವಾರಕೀಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾಲಯದ ಅನುದಾನ ಆಯೋಗದ ಅಧ್ಯಕ್ಷ ಪ್ರೊ.ಎಂ.ಜಗದೀಶ್, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಇದ್ದರು.
1964ರಲ್ಲಿ ವೀರಸಂಕಲ್ಪ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದ ದ್ವಾರಕೀಶ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 40ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ಇವರು 15ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್‌ರಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿದ ಹೆಗ್ಗಳಿಕೆ ದ್ವಾರಕೀಶ್ ಅವರದ್ದು. ಹಾಸ್ಯ ಕಲಾವಿದರಾಗಿ, ನಾಯಕ ನಟನಾಗಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊಂಚ ಕುಳ್ಳರಾಗಿರುವ ದ್ವಾರಕೀಶ್ ಅವರನ್ನು 'ಕುಳ್ಳ ದ್ವಾರಕೀಶ್' ಎಂದು ಕರೆಯುವುದುಂಟು. ಕನ್ನಡ ಮಾತ್ರವಲ್ಲ ತಮಿಳು, ಹಿಂದಿ ಸಿನಿಮಾಗಳನ್ನೂ ದ್ವಾರಕೀಶ್ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಹಿರಿಯ ನಿರ್ದೇಶಕ ದೊರೈ ಭಗವಾನ್ ಆಸ್ಪತ್ರೆಗೆ ದಾಖಲು