ಬೆಂಗಳೂರು: ವಿದ್ಯೆ ಹಣ ಗಳಿಕೆಯ ಸಾಧನವಾಗದೇ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾದರೆ ಮಾತ್ರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲು ಸಾಧ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ. ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೊತಿ ಸಭಾಂಗಣದಲ್ಲಿ ಇಂದು ನಡೆದ ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯೆ ಕೇವಲ ಕಾಗದದ ಸರ್ಟಿಫಿಕೇಟ್ ಆಗಿರಬಾರದು. ಅದು, ಸಂಸ್ಕಾರವನ್ನು ಸಹ ಒಳಗೊಂಡಿರಬೇಕು ಎಂದು ಯುವ ಜನತೆಗೆ ಕಿವಿ ಮಾತು ಹೇಳಿದರು.
ಪ್ರಸ್ತುತ ಎಲ್ಲ ವಿದ್ಯಾರ್ಥಿಗಳಿಗೂ ಗುಣಮಟ್ಟದ ಹಾಗೂ ನೈತಿಕ ಶಿಕ್ಷಣದ ಅಗತ್ಯ ಹೆಚ್ಚಿದೆ. ಅಂತಹ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯ ನೀಡುತ್ತಿದೆ ಎಂದು ಅವರು ತಿಳಿಸಿದರು. ವಿದ್ಯೆ ಮತ್ತು ಸಂಸ್ಕಾರ ಬದುಕಿನ ಬೇರುಗಳಿದ್ದಂತೆ. ಈ ಎರಡೂ ಒಟ್ಟಿಗೆ ಬೆಳೆದಾಗ ಮಾತ್ರ ಬದುಕಿಗೊಂದು ಸಾರ್ಥಕತೆ ಸಿಗುತ್ತದೆ. ಶಿಕ್ಷಣ ಅಂದರೆ ಪುಸ್ತಕ ಜ್ಞಾನ, ಅಕ್ಷರ ಜ್ಞಾನ ಮಾತ್ರವಲ್ಲ ಮನಸ್ಸಿಗೆ ಸಂಸ್ಕಾರವನ್ನು ಕೊಡುವುದು ಸಹ ಶಿಕ್ಷಣದ ಭಾಗ, ಬುದ್ದಿಯ ವಿಕಾಸದೊಂದಿಗೆ ಹೃದಯವಂತಿಕೆಯನ್ನೂ ಬೆಳೆಸಬೇಕು ಎಂದು ಹೇಳಿದರು.
ವಿದ್ಯೆ ವಿನಯವನ್ನು ನೀಡುತ್ತೆ. ವಿನಯದಿಂದ ಮನಷ್ಯನ ವ್ಯಕ್ತಿತ್ವ ರೂಪುಗೊಳ್ಳುತ್ತೆ. ಆ ವ್ಯಕ್ತಿಯಿಂದ ಹಣ ಸಂಪಾದನೆ ಆಗುತ್ತೆ. ಸಂಪಾದಿಸಿದ ಹಣದಿಂದ ಧರ್ಮಕಾರ್ಯಗಳನ್ನು ನಡೆಸಿದಾಗ ಮಾತ್ರ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿ ಜೀವನ ಒಂದು ತಪಸ್ಸು ಇದ್ದಂತೆ. ಪ್ರತಿ ವಿದ್ಯಾರ್ಥಿಯ ಜೀವನ ಕ್ರಮ ಶಿಸ್ತಿಗೆ ಒಳಪಡಬೇಕು. ವಿದ್ಯೆ ಕೇವಲ ಒಬ್ಬನ ಜೀವನವನ್ನು ಕಟ್ಟಿಕೊಡುವುದಷ್ಟೇ ಅಲ್ಲ ಒಂದು ದೇಶದ ಬೆಳವಣಿಗೆಯನ್ನೂ, ದೇಶದ ಸಂಸ್ಕೃತಿಯನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತದೆ. ಒಟ್ಟಾರೆ ಹೇಳಬೇಕು ಅಂದರೆ ವಿದ್ಯೆ ಸಂಪತ್ತು ಹೌದು, ಸಂಸ್ಕಾರವೂ ಹೌದು ಎಂದು ಅವರು ಹೇಳಿದರು.
ಯುವ ಜನತೆ ಎಲ್ಲ ಕ್ಷೇತ್ರಗಳಲ್ಲೂ ಮಿಂಚಬೇಕು: ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲೂ ಚಾಪು ಮೂಡಿಸಬೇಕು, ಎಲ್ಲ ವಿದ್ಯಾರ್ಥಿಗಳಿಗೂ ಉತ್ತಮ ಭವಿಷ್ಯ ಸಿಗಲಿ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲಿ ಎಂದು ಗೌಡರು ಹಾರೈಸಿದರು. ಬೆಂಗಳೂರು ವಿಶ್ವವಿದ್ಯಾಲಯ ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನಭಂಡಾರ, ವಿದ್ಯಾರ್ಥಿಗಳಿಗೆ ನೈತಿಕ ಹಾಗೂ ಗುಣಮಟ್ಟದ ಶಿಕ್ಷಣವನ್ನು ಧಾರೆ ಎರೆಯುತ್ತಿರುವ ಜ್ಞಾನಾಲಯ, ಉನ್ನತ ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸುತ್ತಿರುವ ವಿಶ್ವವಿದ್ಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ ಎಂದರು.
ಇಸ್ರೋ ಅಧ್ಯಕ್ಷರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ ಮಾಜಿ ಪಿಎಂ: ಈ ಸಂಧರ್ಭದಲ್ಲಿ ಇಸ್ರೋದ ಅಧ್ಯಕ್ಷರಾದ ಎಸ್ ಸೋಮನಾಥ್ ಅವರಿಗೆ ನಾನು ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಯಶಸ್ವಿ ಚಂದ್ರಯಾನ - 3ರ ರುವಾರಿ ಆಗಿರುವ ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದು ನನಗೆ ಬಹಳ ಸಂತೋಷ ತಂದಿದೆ. ಇಸ್ರೋ ಸಂಸ್ಥೆ ಇವತ್ತು ನಮ್ಮ ಭಾರತ ದೇಶವನ್ನು ಬಾಹ್ಯಾಕಾಶದ ಭೂಪಟದಲ್ಲಿ ವಿಶ್ವಕ್ಕೆ ಪರಿಚಯ ಮಾಡಿ ನಮಗೆಲ್ಲಾ ಹೆಮ್ಮೆ ತಂದಿದೆ. ಈ ಸಂದರ್ಭದಲ್ಲಿ ಎಲ್ಲ ವಿಜ್ಞಾನಿಗಳನ್ನೂ ಅಭಿನಂದಿಸುತ್ತೇನೆ. ಬೆಂಗಳೂರು ವಿಶ್ವವಿದ್ಯಾನಿಲಯ ನನಗೆ ನೀಡಿರುವ ಗೌರವ ಡಾಕ್ಟರೇಟ್ ಅನ್ನು ತುಂಬಾ ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದರು.
ಇಸ್ರೋದ ಅಧ್ಯಕ್ಷ ಎಸ್. ಸೋಮನಾಥ್ ಅವರ ಅನುಪಸ್ಥಿತಿಯಲ್ಲಿ ಅವರ ಸಂದೇಶದ ವಿಡಿಯೋವನ್ನು ಘಟಿಕೋತ್ಸವದಲ್ಲಿ ಪ್ರದರ್ಶಿಸಲಾಯಿತು. ವಿಡಿಯೋ ಸಂದೇಶದಲ್ಲಿ ಮಾತನಾಡಿದ ಎಸ್. ಸೋಮನಾಥ್, ಬಾಹ್ಯಾಕಾಶ ಸಂಸ್ಥೆಯ ಪ್ರತಿನಿಧಿಯಾಗಿ ನನಗೆ ಲಭಿಸಿರೋ ಈ ಗೌರವ ಅತೀವ ಸಂತಸ ತಂದಿದೆ. ನೂತನ ತಂತ್ರಜ್ಞಾನಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ವೇದಿಕೆಯಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ದೇವೇಗೌಡರು ಹಿರಿಯ ರಾಜಕಾರಣಿ, ರಾಜಕೀಯ ವಿಶ್ಲೇಷಕರು ಮಾತ್ರವಲ್ಲದೇ ಜನರ ಪ್ರಧಾನಿಯಾಗಿದ್ದವರು. ನನಗೆ ನೀಡಿದ ಗೌರವ ಡಾಕ್ಟರೇಟ್ ಅನ್ನು ಚಂದ್ರಯಾನದ ಪ್ರತಿಯೊಬ್ಬ ವಿಜ್ಞಾನಿ ಹಾಗೂ ತಂತ್ರಜ್ಞಾನಿಗೂ ಅರ್ಪಿಸುತ್ತೇನೆ.
ನಾವು ಅನೇಕ ಬಾಹ್ಯಾಕಾಶ ವಿಚಾರದಲ್ಲಿ ಇಂದಿಗೂ ಅನ್ವೇಷಣೆ ನಡೆಸುತ್ತಲೇ ಇದ್ದೇವೆ. ಭಾರತದ ಶಕ್ತಿಯನ್ನು ಮತ್ತೊಮ್ಮೆ ಚಂದ್ರಯಾನ ಮುಖಾಂತರ ಸಾಬೀತು ಮಾಡಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ:Aditya-L1 mission : ಜನವರಿಯಲ್ಲಿ ಎಲ್1 ಪಾಯಿಂಟ್ಗೆ ಆದಿತ್ಯ ನೌಕೆ