ಬೆಂಗಳೂರು: ಇತ್ತೀಚೆಗಷ್ಟೇ ನಟ ಸುದೀಪ್ ಅವರ ಟ್ವಿಟರ್ ಖಾತೆ ಹ್ಯಾಕ್ ಮಾಡಲು ವಿಫಲ ಯತ್ನ ನಡೆದ ಬೆನ್ನಲ್ಲೇ ಇದೀಗ ಟ್ರಾಫಿಕ್ ಪೊಲೀಸ್ ಠಾಣೆಗಳ ಅಧಿಕೃತ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.
ಕಳೆದ ಸೋಮವಾರ ಸುದೀಪ್ ಅವರ ಅಧಿಕೃತ ಟ್ವೀಟರ್ ಖಾತೆ ಹ್ಯಾಕ್ ಮಾಡಲು ಏಳು ಬಾರಿ ಪಾಸ್ ವರ್ಡ್ ಹಾಕಿ ವಿಫಲ ಯತ್ನ ನಡೆದಿತ್ತು. ಇದೀಗ ಕಿಡಿಗೇಡಿಗಳ ಕಣ್ಣು ಸಂಚಾರ ಪೊಲೀಸರು ಬಳಸುವ ಟ್ವಿಟರ್ ಖಾತೆ ಮೇಲೆ ಬಿದ್ದಿದೆ.
ಜಯನಗರ ಸಂಚಾರ ಠಾಣೆ ಹಾಗೂ ಜಯನಗರ ಸಂಚಾರ ಎಸಿಪಿ ಕಚೇರಿ ಬಳಸುವ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ, ಫೋನ್ ಪೇ ಹಾಗೂ ಖಾಸಗಿ ಮಾಹಿತಿ ಬಗ್ಗೆ ಟ್ವೀಟರ್ನಲ್ಲಿ ಕಿಡಿಗೇಡಿಗಳು ಬರೆದುಕೊಂಡಿದ್ದಾರೆ. ಹ್ಯಾಕ್ ಆಗಿರುವ ಮಾಹಿತಿಯನ್ನು ನಗರ ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಸ್ಪಷ್ಟಪಡಿಸಿದ್ದು, ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.