ಬೆಂಗಳೂರು : ಮನೆಗಳ್ಳತನ ಪ್ರಕರಣದ ತನಿಖೆ ಹಂತದಲ್ಲಿರುವಾಗಲೇ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದ ಕೇರಳ ಮೂಲದ ವ್ಯಕ್ತಿಯೇ ಕೃತ್ಯ ಎಸಗಿರುವುದು ಗೊತ್ತಾಗಿದೆ. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಗಾಯತ್ರಿ ಎಂಬುವರು ತಮ್ಮ ಮನೆಯಲ್ಲಿ ಎರಡೂವರೆ ಕೋಟಿ ಮೌಲ್ಯದ ನಗ - ನಾಣ್ಯವನ್ನ ಮನೆಗೆಲಸಗಾರರೇ ದೋಚಿದ್ದರು ಎಂದು ಅನುಮಾನಿಸಿ ಕಳೆದ ಆಗಸ್ಟ್ 13ರಂದು ದೂರು ನೀಡಿದ್ದರು.
ದೂರಿನಡಿ ಪ್ರಕರಣ ದಾಖಲಿಸಿಕೊಂಡು ಮಾಲೀಕಿ ಮನೆಯಲ್ಲಿ ಗಾಯತ್ರಿ ಅವರಿಗೆ ಕಾರು ಚಾಲಕನಾಗಿದ್ದ ಜೊಮನ್ ವರ್ಗೀಸ್ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸಿದ್ದರು. ಈ ಮಧ್ಯೆ ಆಗಸ್ಟ್ 21ರಂದು ಮನೆ ಮಾಲೀಕಿ ತನ್ನನ್ನ ಅವಮಾನಿಸಿದ್ದಾರೆ ಎಂದು ಆರೋಪಿಸಿ ಮನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸಾವಿಗೂ ಮುನ್ನ ಮಲಯಾಳಂ ಭಾಷೆಯಲ್ಲಿ ಏಳು ಪುಟಗಳಿರುವ ಡೆತ್ ನೋಟ್ ಬರೆದಿದ್ದ.
ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಕಳ್ಳತನ ಮಾಡಿದ್ದು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿತ್ತು. ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು ಕದ್ದ ಸ್ಥಳದಲ್ಲಿ ಮೃತ ಆರೋಪಿ ಜೋಮನ್ ವರ್ಗೀಸ್ ಫಿಂಗರ್ ಪ್ರಿಂಟ್ ಸಿಕ್ಕಿತ್ತು. ಸೂಕ್ತ ಸಾಕ್ಷ್ಯಾಧಾರ ಆಧಾರದ ಮೇರೆಗೆ ವರ್ಗೀಸ್ ನನ್ನ ಮತ್ತೆ ವಶಕ್ಕೆ ಪಡೆದುಕೊಳ್ಳುವ ಹಂತದಲ್ಲಿರುವಾಗಲೇ ಬಂಧನ ಭೀತಿಯಿಂದ ಆತ್ಮಹತ್ಯೆಗೆ ಶರಣಾಗಿದ್ದ.
ಕಳ್ಳತನ ಪ್ರಕರಣ ಜೊತೆಗೆ ಪ್ರತ್ಯೇಕವಾಗಿ ಸೂಸೈಡ್ ಕೇಸ್ ದಾಖಲಿಸಿಕೊಂಡ ಪೊಲೀಸರು ಕಳವಾಗಿದ್ದ ಚಿನ್ನದ ಆಭರಣ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಕೇರಳದಲ್ಲಿರುವ ಆರೋಪಿಯ ಪತ್ನಿ ಮನೆಗೂ ಹೋಗಿ ತನಿಖೆ ನಡೆಸಿದ್ದರು. ನೋಟಿಸ್ ನೀಡಿ ವಿಚಾರಣೆ ನಡೆಸುವಾಗ ಪೊಲೀಸರ ಮುಂದೆ ತನ್ನ ಗಂಡನೇ ಆಭರಣ ನೀಡಿರುವುದಾಗಿ ಹೇಳಿಕೆ ಕೊಟ್ಟಿದ್ದರು. ಇದರಂತೆ ಮನೆಯಲ್ಲಿ ಕದ್ದಿದ್ದ ಎರಡೂವರೆ ಕೋಟಿ ಮೌಲ್ಯದ ಚಿನ್ನಾಭರಣ ಪೈಕಿ ಒಂದೂವರೆ ಕೋಟಿ ಮೌಲ್ಯದ ಚಿನ್ನವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನುಳಿದ ಒಂದು ಕೋಟಿ ಮೌಲ್ಯದ ಆಭರಣವನ್ನ ಕೇರಳದ ಬ್ಯಾಂಕ್ ವೊಂದರ ಬ್ರಾಂಚ್ ನಲ್ಲಿ ಅಡವಿಡಲಾಗಿದ್ದು, ಅದನ್ನ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಚರಣೆ ಪೊಲೀಸರು ಮುಂದುವರೆಸಿದ್ದಾರೆ.
ಪೂರ್ವ ವಿಭಾಗ ಡಿಸಿಪಿ ಹೇಳಿದ್ದೇನು? : ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಮಾತನಾಡಿ, ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ಮನೆಗಳವು ಪ್ರಕರಣ ವರದಿಯಾಗಿತ್ತು. ಮನೆ ಮಾಲೀಕರು ಎರಡೂವರೆ ಕೋಟಿ ಮೌಲ್ಯದ ಆಭರಣ ಕಳವಾಗಿದೆ ಎಂದು ಆರೋಪಿಸಿ ಮನೆ ಕೆಲಸದಾಳುಗಳೇ ಕಳವು ಮಾಡಿದ್ದಾರೆ ಎಂದು ದೂರು ನೀಡಿದ್ದರು. ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಮನೆ ಕೆಲಸದವರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು.
ಈ ಮದ್ಯೆ ಕಳೆದ ತಿಂಗಳು 21ರಂದು ಮನೆ ಕೆಲಸಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಸುದ್ದಿ ತಿಳಿದು ನಮ್ಮ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಆ ವೇಳೆ ಏಳು ಪುಟಗಳ ಡೆತ್ ನೋಟ್ ಸಿಕ್ಕಿತ್ತು. ಡೆತ್ ನೋಟ್ ಮಲಯಾಳಂ ಭಾಷೆಯಲ್ಲಿತ್ತು. ಅದನ್ನು ಭಾಷಾಂತರ ಮಾಡಿದ್ದು, ಮನೆ ಮಾಲೀಕರ ಮೇಲೆ ಆರೋಪ ಮಾಡಲಾಗಿತ್ತು. ಬಳಿಕ ತನಿಖೆ ಮುಂದುವರೆಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಡೆತ್ ನೋಟ್ ಆಧಾರದ ಮೇಲೆ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಇನ್ನೊಂದೆಡೆ ಕೇರಳದಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲಾಗುತ್ತಿತ್ತು. ವಿಚಾರಣೆ ಸಂದರ್ಭದಲ್ಲಿ ಮೃತನ ಪತ್ನಿ ಕಳವು ಮಾಡಿದ್ದ 38 ಆಭರಣಗಳನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಭರಣದ ಬಾಕ್ಸ್ಗಳ ಮೇಲೆ ಮೃತ ವ್ಯಕ್ತಿಯ ಪಿಂಗರ್ ಪ್ರಿಂಟ್ ಸಿಕ್ಕಿದೆ. ಇಲ್ಲಿಯವರೆಗೂ ಕಳವಾಗಿದ್ದ 38 ಆಭರಣಗಳು ಹಾಗೂ ವಿದೇಶಿ ಕರೆನ್ಸಿ ಸಹ ಪತ್ತೆಯಾಗಿದೆ. ಇನ್ನೂ ಎರಡು ಆಭರಣಗಳನ್ನ ವಶಪಡಿಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಶ್ರೀಗಂಧ ಮರಗಳ್ಳರ ಬಂಧನ: ಆರೋಪಿಗಳಿಂದ 6.50 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ