ಬೆಂಗಳೂರು : ಕೊರೊನಾ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ, ಕನ್ನಡ ಚಿತ್ರರಂಗ ಹಾಗೂ ಕ್ರೀಡಾರಂಗದ ಖ್ಯಾತನಾಮರು ಪಾಲ್ಗೊಂಡಿರುವ ದೃಶ್ಯ ರೂಪಕವನ್ನು ಬಿಡುಗಡೆಗೊಳಿಸಲಾಯ್ತು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬದಲಾಗು ನೀನು ಬದಲಾಯಿಸು ನೀನು, ಮೈ ಹೀರೋ ದೃಶ್ಯ ರೂಪಕವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಈ ಪ್ರಯತ್ನಕ್ಕೆ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಸಚಿವ ಡಾ. ಸುಧಾಕರ್, ಇದು ವೈದ್ಯಕೀಯ ಶಿಕ್ಷಣ ಇಲಾಖೆಯ ವಿನೂತನ ಪ್ರಯತ್ನ. ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬದಲಾಗು ನೀನು, ಬದಲಾಯಿಸು ನೀನು ಎನ್ನುವ ಸುಂದರ ದೃಶ್ಯ ಕಾವ್ಯವನ್ನ ಚಲನಚಿತ್ರ ಕಲಾವಿದರು, ಸಂಗೀತ ನಿರ್ದೇಶಕರು, ಕ್ರೀಡಾ ತಾರೆಯರು ಒಳಗೊಂಡಿರುವ ದೃಶ್ಯರೂಪದ ಪರಿಕಲ್ಪನೆ ಇದಾಗಿದೆ ಎಂದರು.
ಈ ಕಾರ್ಯಕ್ಕಾಗಿ ಚಲನಚಿತ್ರ ಹಾಗೂ ಕ್ರೀಡಾರಂಗದ ಖ್ಯಾತನಾಮರನ್ನು ಸಂಪರ್ಕಿಸಿದಾಗ ಅವರೆಲ್ಲ ಕೂಡಲೇ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿ, ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಕೊರೊನಾ ಕುರಿತು ಹಲವು ಉಪಯುಕ್ತ ಸಲಹೆಗಳನ್ನು ಕೂಡ ನೀಡಿದ್ದಾರೆ. ಇದಕ್ಕಾಗಿ ಸರ್ಕಾರದ ಪರವಾಗಿ ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಕೊರೊನಾ ವೈರಸ್‌ನ ಹಿಮ್ಮೆಟ್ಟಿಸುವಲ್ಲಿ ಸಂಕಲ್ಪ ಮಾಡಲು ನಾಡಿನ ಜನತೆಗೆ ಸಾಧಕರ ಸಂದೇಶ ಉಪಯುಕ್ತವಾಗಲಿದೆ ಎಂದು ಆಶಿಸುತ್ತೇನೆ. ಇಡೀ ವಿಶ್ವವನ್ನು ಕಾಡುತ್ತಿರುವ ಸಂದರ್ಭದಲ್ಲಿ ನಾಗರಿಕನ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಕುರಿತಂತೆ ಕಲಾವಿದರು ಸಂದೇಶಗಳನ್ನು ನೀಡಿದ್ದಾರೆ. ಅದರಲ್ಲಿಯೂ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ನಾಗರಿಕರು, ವೈದ್ಯರು,ಆರೋಗ್ಯ ಕಾರ್ಯಕರ್ತರ ಬಗ್ಗೆ ಸರ್ಕಾರ ಹಾಗೂ ಸಮುದಾಯ ಕೃತಜ್ಞವಾಗಿದೆ ಎಂಬುದನ್ನು ದೃಶ್ಯರೂಪಕ ಅನಾವರಣಗೊಳಿಸಲಿದೆ ಎಂದು ತಿಳಿಸಿದರು.