ಬೆಂಗಳೂರು: ಬರದಿಂದ ರಾಜ್ಯ ತತ್ತರಿಸಿರುವಾಗ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಬದಲು ಗ್ರಾಮ ವಾಸ್ತವ್ಯಕ್ಕೆ ನಮ್ಮ ಮುಖ್ಯಮಂತ್ರಿ ಹೊರಟಿರುವುದು
ರೋಮ್ ಹೊತ್ತಿ ಉರಿಯುವಾಗ ರಾಜ ಪೀಟೀಲು ಬಾರಿಸಿದಂತಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿದರು. ಸಾಹಿತ್ಯ ಲೋಕಕ್ಕೆ ಕಾರ್ನಾಡ್ ಅಪಾರ ಕೊಡುಗೆ ನೀಡಿದ್ದಾರೆ. ಸರ್ಕಾರಿ ಗೌರವ ತಿರಸ್ಕಾರ ಮಾಡುವ ಮೂಲಕ ಅಗ್ರ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಗಿರೀಶ್ ಕಾರ್ನಾಡ್ ಅವರ ಸಾಧನೆಗಳನ್ನು ಹೊಗಳಿದರು.
ಗಿರೀಶ್ ಕಾರ್ನಾಡ್ ನಿಧನದಿಂದ ರಾಜ್ಯದಲ್ಲಿ ಮೂರು ದಿನ ಶೋಕಾಚಾರಣೆ ಇರುವ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದ ವೈಫಲ್ಯಗಳು ಮತ್ತು ಜಿಂದಾಲ್ ಪ್ರಕರಣ ವಿರೋಧಿಸಿ ಬಿಜೆಪಿ ಯುವ ಮೋರ್ಚಾದ ಜೂನ್ 11ರ ಧರಣಿಯನ್ನು ಜೂನ್ 13 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇವತ್ತು ಪತ್ರಿಕಾರಂಗ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹಳ ಮಹತ್ವದ ಸ್ಥಾನವನ್ನು ಹೊಂದಿದೆ. ಆದರೆ, ಮಾಧ್ಯಮದವರು ಪ್ರಶ್ನೆ ಮಾಡಿದರೆ ಅವರನ್ನು ಜೈಲಿಗೆ ಹಾಕಿಸುವ ಕೆಲಸ ಸಿಎಂ ಮೂಗಿನಡಿಯಲ್ಲಿಯೇ ಆಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಒಂದು ಕಡೆಯಿಂದ ಮುಖ್ಯಮಂತ್ರಿಗಳ ಪುತ್ರ, ಇನ್ನೊಂದು ಕಡೆ ಮಾಜಿ ಪ್ರಧಾನಿ ಸೋತಿರುವ ಸಂದರ್ಭದಲ್ಲಿ ಸಹಜವಾಗಿ ನೋವಾಗಲಿದೆ. ಆದರೆ, ರಾಜಕೀಯದಲ್ಲಿ ಅನುಭವ ಇರುವವರು ಸೋಲನ್ನು ಸ್ವೀಕರಿಸುವ ವ್ಯವಧಾನ ಇಲ್ಲದೆ ಪತ್ರಿಕಾ ಕ್ಷೇತ್ರದವರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ವಿಧಾನಸೌಧಕ್ಕೆ ಮಂತ್ರಿಗಳು ಬರುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮುಖ್ಯಮಂತ್ರಿಗಳು ತಮ್ಮ ಹುಳುಕು ಮುಚ್ಚಿಕೊಳ್ಳಲು ಈಗ ಹೋಟೆಲ್ ವಾಸ್ತವ್ಯ ಬಿಟ್ಟು ಗ್ರಾಮ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಇವತ್ತು ಶಿಕ್ಷಣ ಖಾತೆಯನ್ನು ಸಿಎಂ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಹಿಂದೆ ಇದ್ದ ಮಂತ್ರಿಗಳಾಗಲಿ, ಈಗಿರುವ ಮುಖ್ಯಮಂತ್ರಿಗಳಾಗಲಿ ಇಲಾಖೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿಲ್ಲ. ಪ್ರಗತಿ ಪರಿಶೀಲನೆ ಮಾಡುವ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.