ಬೆಂಗಳೂರು: ದರ್ಶನ್ ಮನೆ ಬಳಿ ಪೇದೆ ದೇವರಾಜ್ ಮೇಲೆ ಕಿಡಿಗೇಡಿಗಳು ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಗಾಯಗೊಂಡಿರುವ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯ ಬಿಲ್ ಕಟ್ಟಲು ಹಣವಿಲ್ಲದೆ ಪೇದೆ ದೇವರಾಜ್ ಅವರ ಕುಟುಂಬಸ್ಥರು ಪರದಾಡುವಂತಾಗಿದೆ.
ದರ್ಶನ್ ಆಗಲಿ ಅಥವಾ ಹುಟ್ಟುಹಬ್ಬ ಆಯೋಜಿಸಿದ್ದ ಆಯೋಜಕರಾಗಲಿ ಪೇದೆಗೆ ಸಹಾಯ ಮಾಡಲು ಮುಂದಾಗಿಲ್ಲ ಎನ್ನಲಾಗ್ತಿದೆ. ಜ್ಞಾನಭಾರತಿ ಪೇದೆಯಾಗಿರುವ ದೇವರಾಜ್ರನ್ನ ನಟ ದರ್ಶನ್ ಜನ್ಮದಿನದಂದು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಆ ವೇಳೆ ಕೆಲ ಅಭಿಮಾನಿಗಳು ತಳ್ಳಾಟ ನೂಕಾಟ ನಡೆಸಿದ್ದರು. ಇದನ್ನು ತಡೆಯಲು ಹೋದ ಪೇದೆ ಮೇಲೆ ಕಲ್ಲು ಎಸೆದಿದ್ದರು. ಈ ವೇಳೆ ಮೂಗಿನ ಭಾಗ ಹಾಗೂ ಕಣ್ಣಿನ ಐ ಸಾಕೆಟ್ಗೆ ಪೆಟ್ಟಾಗಿದೆ.
ಪೇದೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಅವರ ಕುಟುಂಬ ಹಣ ಹೊಂದಿಸಲಾಗದೇ ಸಮಸ್ಯೆಗೆ ಸಿಲುಕಿದ್ದಾರೆ. ಈ ಹಿನ್ನೆಲೆ ಡಿಸಿಪಿ ರಮೇಶ್ ಬಾನೋತ್ ಹಾಗೂ ಸಹೋದ್ಯೋಗಿಗಳು ಹಣ ನಿಡಲು ಮುಂದಾಗಿದ್ದಾರೆ. ಸದ್ಯ ದೇವರಾಜ್ 3 ತಿಂಗಳು ಬೆಡ್ ರೆಸ್ಟ್ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.
ಘಟನೆ ಸಂಬಂಧ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.