ಬೆಂಗಳೂರು: ನಕಲಿ ಚಿನ್ನಾಭರಣಗಳನ್ನು ಬ್ಯಾಂಕ್ಗೆ ಅಡವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದು ಸಿನಿಮೀಯ ಶೈಲಿಯಲ್ಲಿಯೇ ವಂಚಿಸಿದ್ದ ಸ್ಯಾಂಡಲ್ ವುಡ್ ನಿರ್ದೇಶಕ ಸೇರಿದಂತೆ ಇಬ್ಬರನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ದಿ ಫೆಡರಲ್ ಬ್ಯಾಂಕ್ ಶಾಖೆಯ ಸಹಾಯಕ ಉಪ ನಿರ್ದೇಶಕ ಭರತ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಿರ್ದೇಶಕ ಕರಮಲ ಬಾಲ ರವಿಂದ್ರನಾಥ ಹಾಗೂ ಶಿವಕುಮಾರ್ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
2016ರಲ್ಲಿ ತೆರೆಕಂಡಿದ್ದ ಮಧುರ ಸ್ವಪ್ನ ಚಿತ್ರಕ್ಕೆ ಈತ ನಿರ್ದೇಶಕನಾಗಿದ್ದ. ಈ ಚಿತ್ರ ಫ್ಲಾಪ್ ಆಗಿತ್ತು. ಹಣಕಾಸು ತೊಂದರೆ ಎದುರಿಸುತ್ತಿದ್ದ ಬಾಲ ರವೀಂದ್ರನಾಥ್ ಹಾಗೂ ಸ್ನೇಹಿತ ಶಿವಕುಮಾರ್ ಅಕ್ಕಸಾಲಿಗರಾಗಿ ಶ್ರೀರಾಮಪುರದಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಸೇರಿ ಸಂಚು ರೂಪಿಸಿ ಬ್ಯಾಂಕಿನಿಂದ 1 ಕೆ.ಜಿ.ನಕಲಿ ಚಿನ್ನಕ್ಕೆ ಮಿಶ್ರ ಲೋಹ ಮಿಶ್ರಣ ಮಾಡಿ ರಾಜಾಜಿನಗರದ ದಿ ಫೆಡರಲ್ ಬ್ಯಾಂಕಿನಲ್ಲಿ ಕಳೆದ ವರ್ಷ 42.91 ಲಕ್ಷ ಹಣ ಸಾಲ ಪಡೆದಿದ್ದರು.
ಸಾಲ ಪಡೆದು ವರ್ಷವಾದರೂ ಇಎಂಐ ಪಾವತಿಸಲಿರಲ್ಲ. ಅಸಲು ಹಾಗೂ ಬಡ್ಡಿ ಕಟ್ಟುವಂತೆ ನಿರಂತರವಾಗಿ ಬ್ಯಾಂಕಿನಿಂದ ನೋಟಿಸ್ ಕಳುಹಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆ ಚಿನ್ನ ಹರಾಜು ಹಾಕುವುದಾಗಿ ಎಚ್ಚರಿಕೆ ನೀಡಿದರೂ ನಿರ್ದೇಶಕ ತಲೆಕೆಡಿಸಿಕೊಂಡಿರಲಿಲ್ಲ.
ನಂತರ ಸಾಲ ವಸೂಲಿಗಾಗಿ ಅಡವಿಟ್ಟ ಚಿನ್ನಾಭರಣ ತೆಗೆದು ಪರಿಶೀಲಿಸಿದಾಗ ನಕಲಿ ಚಿನ್ನ ಎಂಬುವುದು ಗೊತ್ತಾಗಿದೆ. ಹೊರಗಿನಿಂದ ಶೇ.40ರಷ್ಟು ಚಿನ್ನ, ಒಳಗೆ 60ರಷ್ಟು ಲೋಹ ತುಂಬಿ ಅಡವಿಟ್ಟಿರುವ ಸಂಗತಿ ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸದಾಶಿವನಗರ ಬಳಿ ಬ್ಯಾಂಕಿನಲ್ಲಿ ಸುಮಾರು 8 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.