ಬೆಂಗಳೂರು: ಹಾಸನ ಜಿಲ್ಲೆಯ ಅರಸೀಕೆರೆ ನಗರಸಭೆಯ ಏಳು ವಾರ್ಡ್‌ಗಳಿಗೆ ಉಪ ಚುನಾವಣೆಗೆ ಹೈಕೋರ್ಟ್ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.
ನಗರಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ ಹಾಸನ ಜಿಲ್ಲಾಧಿಕಾರಿ ಆದೇಶ ಎತ್ತಿಹಿಡಿದ ಹೈಕೋರ್ಟಿನ ಏಕ ಸದಸ್ಯ ನ್ಯಾಯಪೀಠದ ತೀರ್ಪು ರದ್ದುಪಡಿಸಲು ಕೋರಿ ಎಂ. ಎಸ್ ಹರ್ಷವರ್ಧನ ರಾಜ್ ಎಂಬುವರು ಸೇರಿ ಇತರ ಏಳು ಅನರ್ಹ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸುನೀಲ್ ದತ್ ಯಾದವ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಮೇಲ್ಮನವಿದಾರರ ಪರ ವಕೀಲರು ಹಾಜರಾಗಿ, ಮೇಲ್ಮನವಿದಾರರು ಪ್ರತಿನಿಧಿಸಿದ್ದ ಅರಸೀಕೆರೆ ನಗರಸಭೆಯ 1, 8, 18, 19, 25 ಮತ್ತು 28 ವಾರ್ಡ್‌ಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ಅ. 3ರಂದು ವೇಳಾಪಟ್ಟಿ ಪ್ರಕಟಿಸಿದೆ. ಜತೆಗೆ, ಅ. 10ರೊಳಗೆ ಚುನಾವಣಾ ಅಧಿಸೂಚನೆ ಪ್ರಕಟಿಸಲು ಹಾಸನ ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.
ಒಂದೊಮ್ಮೆ ಜಿಲ್ಲಾಧಿಕಾರಿ ಚುನಾವಣಾ ಅಧಿಸೂಚನೆ ಪ್ರಕಟಿಸಿದರೆ, ಈ ಮೇಲ್ಮನವಿಯ ವಿಚಾರಣಾ ಮಾನ್ಯತೆ ಕಳೆದುಕೊಳ್ಳಲಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ಅಂಶ ಪರಿಗಣಿಸಿದ ವಿಭಾಗೀಯ ಪೀಠ, ಮೇಲ್ಮನವಿಯ ಮುಂದಿನ ವಿಚಾರಣೆವರೆಗೆ ಚುನಾವಣಾ ಆಯೋಗದ ನೋಟಿಫಿಕೇಷನ್ ಆಧರಿಸಿ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನಿರ್ದೇಶಿಸಿದೆ.
ಅಲ್ಲದೇ, ಹಾಸನ ಜಿಲ್ಲಾಧಿಕಾರಿ, ಜೆಡಿಎಸ್‌ನ ಮಾಜಿ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ, ಜೆಡಿಎಸ್ ಅರಸಿಕೆರೆ ತಾಲೂಕು ಅಧ್ಯಕ್ಷ ಬಿಳಿಚೌಡಯ್ಯ, ಅರಸೀಕೆರೆ ನಗರಸಭೆಯ ಸದಸ್ಯ (ವಾರ್ಡ್-26) ಎಂ. ಸಮೀವುಲ್ಲಾ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದ ವಿಭಾಗೀಯ ಪೀಠ ಮೇಲ್ಮನವಿ ವಿಚಾರಣೆಯನ್ನು ಅ. 12ಕ್ಕೆ ಮುಂದೂಡಿತು.
ಅರಸೀಕೆರೆ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಗೆ 2020ರ ನ. 1ರಂದು ಚುನಾವಣೆ ನಡೆದಿತ್ತು. ಉಪಾಧ್ಯಕ್ಷರಾಗಿ ಜೆಡಿಎಸ್ ಅಭ್ಯರ್ಥಿ ಹಾಗೂ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಈ ವಿಚಾರದಲ್ಲಿ ನಗರಸಭೆಯ ಜೆಡಿಎಸ್ ಸದಸ್ಯರಾಗಿದ್ದ ಮೇಲ್ಮನವಿದಾರರಾದ ಎಂ. ಎಸ್ ಹರ್ಷವರ್ಧನ ರಾಜ್, ಬಿ. ಎಸ್ ಚಂದ್ರಶೇಖರಯ್ಯ, ಕೆ. ಕವಿತಾ ದೇವಿ, ಬಿ. ಎನ್. ವಿದ್ಯಾಧರ್, ಆಯಿಷಾ, ಎ. ವಿ. ದರ್ಶನ್ ಮತ್ತು ಪುಟ್ಟಸ್ವಾಮಿ, ಮೇಲ್ಮನವಿದಾರರು ಮತ್ತವರ ಪಕ್ಷದ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು.
ನಂತರ ಪಕ್ಷ ವಿರೋಧಿ ಚುಟುವಟಿಕೆ ಆರೋಪದ ಮೇಲೆ ಹೆಚ್. ಕೆ ಕುಮಾರಸ್ವಾಮಿ ಹಾಗೂ ಬಿಳಿಚೌಡಯ್ಯ ನೀಡಿದ ದೂರು ಆಧರಿಸಿ ಮೇಲ್ಮನವಿದಾರರನ್ನು ನಗರಸಭೆಯಲ್ಲಿ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಹಾಸನ ಜಿಲ್ಲಾಧಿಕಾರಿ ನ. 18ರಂದು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಅನರ್ಹ ಸದಸ್ಯರು ಹೈಕೋರ್ಟಿನ ಏಕ ಸದಸ್ಯ ನ್ಯಾಯಪೀಠ 2022ರ ಜುಲೈ 21ರಂದು ವಜಾಗೊಳಿಸಿತ್ತು. ಈ ಆದೇಶ ರದ್ದುಪಡಿಸಲು ಕೋರಿ ವಿಭಾಗೀಯಪೀಠಕ್ಕೆ ಅವರು ಇದೀಗ ಮೇಲ್ಮನವಿ ಸಲ್ಲಿಸಿದ್ದಾರೆ.
ಓದಿ: ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೋಗಲು ಕಾರಣರಾಗುತ್ತಿದ್ದ ಕಾಲೇಜುಗಳಿಗೆ ಹೈಕೋರ್ಟ್ ದಂಡ