ಬೆಂಗಳೂರು: ದುಬೈನಿಂದ ವಾಪಸ್ ಆಗಿದ್ದ 67 ವರ್ಷದ ಮಹಿಳೆಗೆ ಕೊರೊನಾ ಸೋಂಕಿನ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮಾರ್ಚ್ 3 ರಿಂದ 8 ರವರೆಗೆ ದುಬೈನಲ್ಲಿದ್ದ 67 ವರ್ಷದ ಮಹಿಳೆ ಗೋವಾಗೆ ಬಂದು ಅಲ್ಲಿಂದ ಡೊಮೆಸ್ಟಿಕ್ ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದರು. ಅವರಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ಅವರನ್ನು ಐಸೋಲೇಷನ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರೊಂದಿಗಿನ ಪ್ರಥಮ ಹಾಗೂ ಎರಡನೇ ಹಂತದ ಸಂಪರ್ಕಿತ ವ್ಯಕ್ತಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬೇರೆ ದೇಶದಲ್ಲಿ ಮೊದಲನೇ ಹಾಗೂ ಎರಡನೇ ಹಂತದಲ್ಲಿ ಎಡವಿದ್ದರಿಂದ ಮೂರು, ನಾಲ್ಕನೇ ಹಂತ ತಲುಪಿದರು. ನಾವು ಎಡವುವುದು ಬೇಡ ಎಂದು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ. ಇತರ ದೇಶಗಳಿಂದ ನಾವು ಪಾಠ ಕಲಿತು ಮುನ್ನಡೆಯುತ್ತಿದ್ದೇವೆ. ಜನರಿಂದಲೂ ನಮಗೆ ಉತ್ತಮ ಸಹಕಾರ ಸಿಗುತ್ತಿದೆ ಎಂದರು.
ವೈರಾಣು ಬಂದರೆ ಸಾವೇ ಗತಿ ಎನ್ನುವ ತೀರ್ಮಾನಕ್ಕೆ ಬರುವಂತೆ ಆಗಬಾರದು. ವೈರಾಣು ಬಂದು ಅದಾಗಿಯೇ ಹೋಗಲಿದೆ. ಚಿಕಿತ್ಸೆ ನೀಡಿಯೂ ಹೋಗಲಿದೆ. ಬಂದವರೆಲ್ಲಾ ಸಾಯಲ್ಲ. ಹಾಗಾಗಿ ಡೆಡ್ಲಿಯಂತಹ ಪದ ಬಳಕೆ ನಿಯಂತ್ರಿಸಿ. ಇಲ್ಲವಾದರೆ ಕೊರೊನಾ ಸೋಂಕಿತರು ಮಾನಸಿಕವಾಗಿ ಕುಗ್ಗಲಿದ್ದಾರೆ ಎಂದು ಮನವಿ ಮಾಡಿದರು.
ಎಸಿ ಸ್ಥಳದಲ್ಲಿ ಹೆಚ್ಚಿನ ಜನ ಇದ್ದರೆ ವೈರಾಣು ಹೆಚ್ಚು ಸಮಯ ಇದ್ದು, ಸಾಕಷ್ಟು ಜನರಿಗೆ ಹರಡುವ ಸಾಧ್ಯತೆ ಇದೆ. ಹಾಗಾಗಿ ರೆಸ್ಟೋರೆಂಟ್ಗಳಲ್ಲಿ ಎಸಿ ಆಫ್ ಮಾಡಿ ಸೇವೆ ನೀಡಬೇಕು. ಎರಡು ಚೇರ್ಗಳ ನಡುವೆ ಒಂದು ಮೀಟರ್ ಅಂತರ ಕಾಯ್ದುಕೊಳ್ಳಲು ಸೂಚಿಸಿದ್ದೇವೆ ಎಂದು ತಿಳಿಸಿದರು.
ಅತ್ಯವಶ್ಯಕತೆ ಇದ್ದರೆ ಮಾತ್ರ ಆಸ್ಪತ್ರೆಗೆ ಭೇಟಿ ಕೊಡಿ. ಅನಗತ್ಯವಾಗಿ ಹೋಗದೇ ಅಂತಹ ಆಸ್ಪತ್ರೆಯಲ್ಲಿ ಆಗುವ ಜನಸಂದಣಿ ತಪ್ಪಿಸಿ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗುವುದನ್ನು 15 ದಿನ ವಿಳಂಬ ಮಾಡಲು ಸಾಧ್ಯವಾ ನೋಡಿ ಎಂದು ಸಲಹೆ ನೀಡಿದರು.
ದಂತ ಚಿಕಿತ್ಸೆ ಎಸೆನ್ಷಿಯಲ್ ಸೇವೆ ಅಲ್ಲ. ಹಾಗಾಗಿ ಮುಂದಿನ ಆದೇಶದವರೆಗೆ ರಾಜ್ಯದ ಎಲ್ಲ ದಂತ ಚಿಕಿತ್ಸಾ ಕೇಂದ್ರ ಮುಚ್ಚಲು ಸೂಚನೆ ನೀಡಿದ್ದೇವೆ. ವೈದ್ಯರಿಗೆ ರೋಗಿಗೆ ಅಂತರ ಕಡಿಮೆ ಇರುತ್ತೆ ಹಾಗಾಗಿ ಈ ನಿರ್ಧಾರ ಕೈಗೊಂಡಿದ್ದೇವೆ. ಫಿಜಿಯೋಥೆರಪಿ ಸದ್ಯಕ್ಕೆ ಮುಚ್ಚಲ್ಲ. ಪರಿಸ್ಥಿತಿ ನೋಡಿ ನಿರ್ಧರಿಸಲಿದ್ದೇವೆ ಎಂದರು.