ಬೆಂಗಳೂರು: ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯದಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ(ತಿದ್ದುಪಡಿ)ವಿಧೇಯಕ 2020ನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಈ ವಿಧೇಯಕದ ಪ್ರಕಾರ ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ನ್ಯಾಷನಲ್ ಲಾ ಸ್ಕೂಲ್ನಲ್ಲಿ ಮೀಸಲಾತಿ ನೀಡಲಾಗುತ್ತದೆ. ಅದರಂತೆ ಕನ್ನಡ ವಿದ್ಯಾರ್ಥಿಗಳಿಗೆ 25% ಮೀಸಲಾತಿ ನೀಡಲು ಈ ವಿಧೇಯಕ ಅನುವು ಮಾಡಲಿದೆ. ಭಾರತದಲ್ಲಿನ 19 ರಾಷ್ಟ್ರೀಯ ಕಾನೂನು ವಿವಿಗಳು ರಾಜ್ಯ ನಿವಾಸಿಗಳಿಗೆ ಮೀಸಲಾತಿಯನ್ನು ನೀಡುತ್ತಿದೆ. ಈಗಾಗಲೇ ಮಧ್ಯ ಪ್ರದೇಶದಲ್ಲಿ ರಾಜ್ಯದ ನಿವಾಸಿಗಳಿಗೆ 25% ಮೀಸಲಾತಿ ನೀಡಿದೆ. ಅದೇ ರೀತಿ ಇದೀಗ ರಾಜ್ಯದಲ್ಲೂ ಅದೇ ಮಾದರಿಯ ಮೀಸಲಾತಿ ನೀಡಲು ಸರ್ಕಾರ ವಿಧೇಯಕ ಮಂಡನೆ ಮಾಡಿದೆ.
ಕನ್ನಡ ರಾಜಭಾಷಾ ವಿಧೇಯಕ ಅಂಗೀಕಾರ: ಕರ್ನಾಟಕ ರಾಜಭಾಷಾ ತಿದ್ದುಪಡಿ ವಿಧೇಯಕ 2020ನ್ನು ವಿಧಾನ ಸಭೆಯಲ್ಲಿ ಅಂಗೀಕರಿಸಲಾಯಿತು. ಈ ವಿಧೇಯಕದಂತೆ ಯಾವುದೇ ಸರ್ಕಾರಿ ಆದೇಶ, ನಿಯಮ, ಅಧಿನಿಯಮಗಳು, ಉಪವಿಧಿಗಳ ಕನ್ನಡ ಭಾಷಾಂತರವನ್ನು ರಾಜ್ಯ ಸರ್ಕಾರಕ್ಕೇ ದೃಢೀಕರಿಸುವ ಅಧಿಕಾರ ನೀಡಿದೆ. ವಿಧೇಯಕದಂತೆ ಯಾವುದೇ ಕೇಂದ್ರ ಅಧಿನಿಯಮಗಳು, ರಾಜ್ಯ ಅಧಿನಿಯಮಗಳು ಅಥವಾ ರಾಜ್ಯ ಹೊರಡಿಸಿರುವ ಯಾವುದೇ ಕಾನೂನು, ನಿಯಮ, ಆದೇಶಗಳ ಕನ್ನಡ ಭಾಷಾಂತರವನ್ನು ಅವುಗಳ ಅಧಿಕೃತ ಕನ್ನಡ ಪಠ್ಯವೆಂದು ಭಾವಿಸತಕ್ಕದ್ದು.
ಪ್ರಸ್ತುತ ಪ್ರತಿಯೊಂದು ಆದೇಶ, ನಿಯಮ, ಅಧಿ ನಿಯಮಗಳ ಕನ್ನಡ ಭಾಷಾಂತರದ ಪ್ರಕಟಣೆಗೆ ಮುನ್ನ ರಾಜ್ಯಪಾಲರ ಅನುಮೋದನೆಯನ್ನು ಪಡೆಯಬೇಕಾಗಿತ್ತು. ಇನ್ನು ಮುಂದೆ ರಾಜ್ಯಪಾಲರ ಬದಲಿಗೆ ರಾಜ್ಯ ಸರ್ಕಾರಕ್ಕೆ ಅನುಮೋದಿಸುವ ಅಧಿಕಾರವನ್ನು ನೀಡಲು ಈ ವಿಧೇಯಕವನ್ನು ತರಲಾಗಿದೆ.