ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ 74ನೇ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ನಡೆದಿದೆ.
ಸಿದ್ಧತೆ ಕುರಿತು ಪಾಲಿಕೆ ಆಯುಕ್ತ ಎನ್. ಮಂಜುನಾಥ್, ನಗರ ಪೊಲೀಸ್ ಆಯುಕ್ತ ಕಮಲ್ ಸುದ್ಧಿಗೋಷ್ಠಿ ನಡೆಸಿದರು. ನಗರ ಜಿಲ್ಲೆ ಜಿಲ್ಲಾಧಿಕಾರಿ ಜಿ. ಎನ್. ಶಿವಮೂರ್ತಿ ಹಾಗೂ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.
ಈ ವೇಳೆ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಕೋವಿಡ್ - 19 ಹಿನ್ನೆಲೆ ಸಮಾರಂಭದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಹಾಗೂ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ, ಪರೇಡ್ (ಮಾರ್ಚ್ ಪಾಸ್ಟ್) ಇರದೇ ಅತ್ಯಂತ ಸರಳವಾಗಿ ಸಮಾರಂಭ ಆಚರಣೆ ಮಾಡಲಾಗುತ್ತದೆ. ಆಗಸ್ಟ್ 15ರಂದು ಮುಖ್ಯಮಂತ್ರಿಗಳು ಬೆಳಗ್ಗೆ 8.58ಕ್ಕೆ ಮೈದಾನಕ್ಕೆ ಆಗಮಿಸಲಿದ್ದು, 9.00 ಗಂಟೆಗೆ ದ್ವಜಾರೋಹಣ ನಡೆಯಲಿದೆ. ಈ ಬಾರಿ ದ್ವಜಾರೋಹಣದ ಬಳಿಕ ಮುಖ್ಯಮಂತ್ರಿಗಳ ತುಕಡಿಗಳ ತಪಾಸಣೆ ಇರುವುದಿಲ್ಲ. ಮುಖ್ಯಮಂತ್ರಿಗಳ ಭಾಷಣ ಮುಗಿದ ಬಳಿಕ ರಾಷ್ಟ್ರಗೀತೆ, ನಾಡಗೀತೆ, ರೈತ ಗೀತೆ ಮಾತ್ರ ಇರಲಿವೆ ಎಂದು ತಿಳಿಸಿದರು.
ಈ ಬಾರಿಯ ಸಮಾರಂಭಕ್ಕೆ ವಿಶೇಷವಾಗಿ 75 ಮಂದಿ ಕೊರೊನಾ ವಾರಿಯರ್ಸ್ ಹಾಗೂ 25 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾದವರು ಬರಲಿದ್ದಾರೆ. ಜೊತೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಡಿಫೆನ್ಸ್ ಅಧಿಕಾರಿಗಳು ಸೇರಿ 500 ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ದೂರದರ್ಶನದಿಂದ ನೇರ ಪ್ರಸಾರ ಇರಲಿದೆ ಎಂದರು.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಕೋವಿಡ್-19 ಮಾರ್ಗಸೂಚಿ ಪ್ರಕಾರ ಕಾರ್ಯಕ್ರಮ ಆಚರಣೆ ಮಾಡಲಾಗುವುದು. ವಿಶೇಷ ಆಹ್ವಾನಿತರು ಜನಪ್ರತಿನಿಧಿ, ಕೋವಿಡ್ ವಾರಿಯರ್ಸ್, ಕೋವಿಡ್ ಗುಣಮುಖರಾದವರು, ಮಾಧ್ಯಮದವರು ಹಾಗೂ ಡಿಫೆನ್ಸ್ ಅಧಿಕಾರಿಗಳಿಗೆ ಮಾತ್ರ ಅವಕಾಶವಿದ್ದು, ಜನರು ಬರಲು ಅವಕಾಶ ಇಲ್ಲ. ಪರೇಡ್ ಉಸ್ತುವಾರಿ ದಕ್ಷಿಣ ಡಿಸಿಪಿ ಗಿರೀಶ್ ವಹಿಸಿಕೊಂಡಿದ್ದು, ಕವಾಯತಿನಲ್ಲಿ ಕೆಎಸ್ಆರ್ಪಿ ಸಿವಿಲ್/ಮಹಿಳಾ/ಹೋಮ್ ಗಾರ್ಡ್ಸ್ ಭಾಗವಹಿಸುತ್ತಾರೆ. 16 ತುಕಡಿ, 5 ಬ್ಯಾಂಡ್ ಗಳು ಭಾಗಿಯಾಗಲಿವೆ. 680 ಜನ ಕರ್ತವ್ಯದಲ್ಲಿ ಇರಲಿದ್ದಾರೆ. 47 ಕ್ಯಾಮರಾಗಳನ್ನ ನಿಯೋಜನೆ ಮಾಡಲಾಗಿದೆ. 1 ಗರುಡಾ ಫೋರ್ಸ್, ಡಿ-ಸ್ವಾಟ್, 10 ಕೆಎಸ್ಆರ್ಪಿ ತುಕಡಿಗಳು ಇರಲಿದೆ.
ಬಿಳಿ ಪಾಸ್ ಗಳನ್ನು ಹೊಂದಿರೋ ಗಣ್ಯರು, ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ರಕ್ಷಣಾ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಕಬ್ಬನ್ ರಸ್ತೆಯಲ್ಲಿ ಸಂಚರಿಸಿ, ಎರಡನೇ ಪ್ರವೇಶದ್ವಾರದ ಮುಖಾಂತರ ಮೂಲಕ ಬರಬೇಕು. ಪಿಂಕ್ ಪಾಸ್ಗಳನ್ನು ಹೊಂದಿರುವವರಿಗೆ ಗೇಟ್ ನಂಬರ್ 3 ರಿಂದ ಪ್ರವೇಶಕ್ಕೆ ಅವಕಾಶ. ಇದರಲ್ಲಿ ಮಾಧ್ಯಮದವರು, ಡಿಸಿಪಿ, ಇಲಾಖೆಗಳ ಮೇಲಧಿಕಾರಿಗಳು ಇರಲಿದ್ದಾರೆ. ತುರ್ತು ಸೇವೆ, ಕೆಎಸ್ಆರ್ಪಿ, ಸಿಆರ್ಟಿ, ಬಿಬಿಎಂಪಿ ವಾಹನಗಳಿಗೆ ದ್ವಾರ ಎರಡರ ಮೂಲಕ ಮೈದಾನಕ್ಕೆ ಬರಲು ಅವಕಾಶ ಇದೆ ಎಂದರು.
ಇನ್ನು ಕೆಜಿ ಹಳ್ಳಿಯ ಘಟನೆ ಸಂಬಂಧ ಎಸ್ಡಿಪಿಐ ಕಾರ್ಯಕರ್ತರ ಹೆಸರು ಕೇಳಿ ಬರುತ್ತಿದೆ ಎನ್ನುವ ವಿಚಾರಕ್ಕೆ ಮಾತನಾಡಿದ ಅವರು, ಇನ್ವೆಸ್ಟಿಗೇಷನ್ ಜಾರಿಯಲ್ಲಿದೆ. ತನಿಖೆಯ ಹಂತದಲ್ಲಿ ಯಾವುದೇ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ಮೊದಲ ಹಂತದಲ್ಲಿ ತನಿಖೆಯಲ್ಲಿ ಈ ರೀತಿ ಹೇಳಲು ಸಾಧ್ಯವಿಲ್ಲ. ಮುಂದಿನ ದಿನದಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತೇವೆ. ನಮ್ಮ ಅಧಿಕಾರಿಗಳು ಪ್ರಕರಣದ ಕುರಿತು ಮಾಹಿತಿ ಕಲೆ ಪಡೆಯುತ್ತಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ 147 ಜನರನ್ನು ಬಂಧಿಸಲಾಗಿದೆ ಎಂದರು.