ಬೆಂಗಳೂರು : ನಾಳೆಯಿಂದ ಬಾರ್, ಲಾಡ್ಜ್ ಮತ್ತು ಕ್ಲಬ್ ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗುತ್ತೆ ಎಂದು ಅಬಕಾರಿ ಸಚಿವರು ತಿಳಿಸಿದ್ದರು. ಆದ್ರೆ ಇದೀಗ ಅಬಕಾರಿ ಇಲಾಖೆ ಕೆಲ ನಿಬಂಧನೆಗಳೊಂದಿಗೆ ಆದೇಶ ಹೊರಡಿಸಿದ್ದು, ದಾಸ್ತಾನು ಖಾಲಿಯಾಗುವ ತನಕ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ.
ಬಾರ್, ಲಾಡ್ಜ್ ಹಾಗೂ ಕ್ಲಬ್ ಗಳಲ್ಲಿ ಹಾಲಿ ಇರುವ ಮದ್ಯ ದಾಸ್ತಾನು ಖಾಲಿಯಾಗುವ ತನಕ ಮಾತ್ರ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಹಾಲಿ ಇರುವ ದಾಸ್ತಾನು ಖಾಲಿ ಆದ ಬಳಿಕ ಮದ್ಯ ಮಾರಾಟ ಮಾಡಲು ಅನುಮತಿ ಇಲ್ಲ. ಲಾಕ್‌ಡೌನ್ ಅವಧಿ ಮೇ 17ರ ವರೆಗೆ ಮಾತ್ರ ದಾಸ್ತಾನು ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಏಪ್ರಿಲ್ 4 ರಿಂದ ಎಂಎಸ್ ಐಎಲ್, ಎಂಆರ್ ಪಿ ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಮದ್ಯ ಮಾರಾಟ ಅನುಮತಿಯನ್ನ ಬಾರ್, ಕ್ಲಬ್ ಹಾಗೂ ಲಾಡ್ಜ್ ಗಳಿಗೂ ವಿಸ್ತರಿಸಲಾಗಿದೆ. ಬಾರ್, ಕ್ಲಬ್ ಹಾಗೂ ಲಾಡ್ಜ್ ಗಳ ಮಾಲೀಕರು ಲಾಕ್‌ಡೌನ್ ಹಿನ್ನೆಲೆ ಹೆಚ್ಚಿನ ಪ್ರಮಾಣದ ಮದ್ಯ, ಬಿಯರ್ ದಾಸ್ತಾನು ಇದ್ದು, ಆರು ತಿಂಗಳಲ್ಲಿ ಬಿಯರ್ ಮಾರಾಟವಾಗದೇ ಹೋದಲ್ಲಿ ಹಾಳಾಗಿ ಅದನ್ನು ನಾಶ ಪಡಿಸಬೇಕಾಗುತ್ತದೆ ಎಂದು ಅವಲತ್ತುಕೊಂಡಿದ್ದರು. ಹೀಗಾಗಿ ದಾಸ್ತಾನು ಇರುವ ಮದ್ಯ ಮಾರಾಟಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಸರ್ಕಾರ ಹಾಲಿ ಇರುವ ದಾಸ್ತಾನು ಖಾಲಿಯಾಗುವ ತನಕ ಕ್ಲಬ್, ಲಾಡ್ಜ್ ಹಾಗೂ ಬಾರ್ ಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡಿದೆ. ಪಾರ್ಸಲ್ ಮೂಲಕ ಮಾರಾಟಕ್ಕೆ ಅವಕಾಶ ನೀಡಿದ್ದು, ಎಂಆರ್ ಪಿ ದರದಲ್ಲೇ ಮಾರುವಂತೆ ನಿರ್ದೇಶಿಸಿದೆ.