ಬೆಂಗಳೂರು: ಆರ್.ಆರ್. ನಗರದ ಉಪ ಚುನಾವಣಾ ಕಣಕ್ಕೆ ತಾರಾ ಮೆರುಗು ಬಂದಿದ್ದು, ಇಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟಿ ಖುಷ್ಬೂ ಪ್ರಚಾರ ನಡೆಸಿದರು.
ರಾಜರಾಜೇಶ್ವರಿ ನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟಿ ಖುಷ್ಬೂ ಭರ್ಜರಿ ರೋಡ್ ಶೋ ನಡೆಸಿ ಮತಯಾಚಿಸಿದರು. ಲಗ್ಗೆರೆ ವ್ಯಾಪ್ತಿಯ ಕೆಂಪೇಗೌಡ ನಗರ ಆರ್ಚ್ನಿಂದ ಲಗ್ಗೆರೆ ಕ್ವಾರ್ಟರ್ಸ್ ಮೂಲಕ ತೆರಳಿ, ತೆರೆದ ವಾಹನದಲ್ಲಿ ಅಭ್ಯರ್ಥಿ ಮುನಿರತ್ನ ಜೊತೆಯಲ್ಲಿ ಪ್ರಚಾರ ನಡೆಸಿದರು. ಖುಷ್ಬೂ ಪ್ರಚಾರದ ಹಿನ್ನೆಲೆಯಲ್ಲಿ ಭರ್ಜರಿ ಸಿದ್ಧತೆ ನಡೆಸಲಾಗಿತ್ತು. ನೂರಾರು ಸಂಖ್ಯೆಯ ಕಾರ್ಯಕರ್ತರು ಮೆರವಣಿಗೆ ನಡೆಸಿ, ಮತಯಾಚಿಸಿದರು.
ಕೊರೊನಾ ನಿಯಮ ಉಲ್ಲಂಘನೆ:
ಮತ ಪ್ರಚಾರ ಱಲಿಯಲ್ಲಿ ಕೊರೊನಾ ನಿಯಮವನ್ನು ಗಾಳಿಗೆ ತೂರಲಾಯಿತು. ಮಾಸ್ಕ್, ಸಾಮಾಜಿಕ ಅಂತರ ಇಲ್ಲದೇ ಜಾತ್ರೆಯಂತೆ ಜನರು ಒಗ್ಗೂಡಿ ಮೆರವಣಿಗೆ ನಡೆಸಿದರು. ಪಕ್ಷ ಮತ್ತು ಅಭ್ಯರ್ಥಿ ಪರ ಘೋಷಣೆ ಕೂಗುತ್ತಾ ಲಗ್ಗೆರೆ ವಾರ್ಡ್ನಲ್ಲಿ ಅಬ್ಬರದ ಪ್ರಚಾರ ಕೈಗೊಂಡರು.
ನಿಯಮ ಪಾಲಿಸಿದ ನಟಿ-ಅಭ್ಯರ್ಥಿ:
ಮತ ಪ್ರಚಾರ ಮೆರವಣಿಗೆಯಲ್ಲಿ ನಿಯಮ ಉಲ್ಲಂಘನೆಯಾದರೂ ನಟಿ ಖುಷ್ಬೂ ಮಾತ್ರ ಮಾಸ್ಕ್ ಧರಿಸಿಯೇ ಇದ್ದರು. ಅಭ್ಯರ್ಥಿ ಮುನಿರತ್ನ, ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಕೂಡ ಮಾಸ್ಕ್ ಧರಿಸಿಯೇ ಮತಯಾಚನೆ ಮಾಡಿ ಕೊರೊನಾ ನಿಯಮ ಪಾಲಿಸಿದರು.