ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗೋತ್ಸವ ವೇಳೆ ಕರಗ ಹೊತ್ತಿದ್ದ ಪೂಜಾರಿ ಜ್ಞಾನೇಂದ್ರ ಅವರ ಮೇಲೆ ರಾಸಾಯನಿಕ ಎರಚಿ ಗಾಯಗೊಳಿಸಿದ್ದ ವ್ಯಕ್ತಿಯನ್ನು ಹಲಸೂರುಗೇಟ್ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಜೆಪಿ ನಗರ ನಿವಾಸಿ ಆದಿನಾರಾಯಣ ಎಂಬಾತ ಬಂಧಿತ ಆರೋಪಿ. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಹಳೆ ವೈಷ್ಯಮ್ಯದಿಂದ ಕೃತ್ಯವೆಸಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.
ಬೆಳ್ಳಿ ವಸ್ತುಗಳಿಗೆ ಬಳಸಲಾಗುವ ಸೈನೆಡ್ ಪೆಟೆಲ್ಸ್ ಎಂಬ ರಾಸಾಯನಿಕ ದ್ರಾವಣವನ್ನ ಹೂವಿನಲ್ಲಿ ಬೆರೆಸಿ ಕರಗ ಹೊತ್ತಿದ್ದ ಜ್ಞಾನೇಂದ್ರ ಮೇಲೆ ಆರೋಪಿ ಎರಚಿದ್ದ. ಸಿಂಪಡಿಸುತ್ತಿದ್ದಂತೆ ಜ್ಞಾನೇಂದ್ರ ಅವರ ಕುತ್ತಿಗೆ ಹಾಗೂ ದೇಹದ ವಿವಿಧ ಭಾಗಗಳಲ್ಲಿ ಗಾಯವಾಗಿತ್ತು. ಈ ಸಂಬಂಧ ಜ್ಞಾನೇಂದ್ರ ಅವರು ನೀಡಿದ ದೂರಿನ ಮೇರೆಗೆ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಕರಗ ಹೊರದಿರಲು ಪ್ಲಾನ್ ಮಾಡಿಕೊಂಡಿದ್ದ ಆರೋಪಿ: ಜ್ಞಾನೇಂದ್ರ ಅವರ ಮೇಲಿನ ಹಳೆ ವೈಷ್ಯಮದಿಂದ ಕರಗ ನಿಲ್ಲಿಸಬೇಕೆಂದು ಆರೋಪಿ ಆದಿನಾರಾಯಣ ಪ್ಲ್ಯಾನ್ ಮಾಡಿಕೊಂಡಿದ್ದನು. ಆದಿನಾರಾಯಣ ಇದಕ್ಕಾಗಿ ಹಲವು ದಿನಗಳಿಂದ ಹೊಂಚು ನಡೆಸಿ ಬೆಳ್ಳಿ ಆಭರಣಗಳಿಗೆ ಬಳಸಲಾಗುವ ಸೈನೆಡ್ ಪೆಟೆಲ್ಸ್ ಎಂಬ ಕೆಮಿಕಲ್ಸ್ ಎರಚಲು ಸಿದ್ದತೆ ನಡೆಸಿಕೊಂಡಿದ್ದ.
ಏಪ್ರಿಲ್ 6 ರಂದು ಮಧ್ಯರಾತ್ರಿ ಕರಗ ಹೊತ್ತಿದ್ದ ಜ್ಞಾನೇಂದ್ರ ಅವರ ಮೇಲೆ ಭಕ್ತರ ಸೋಗಿನಲ್ಲಿ ಬಂದ ಆದಿನಾರಾಯಣ ಹೂವು ಜೊತೆ ಕೆಮಿಕಲ್ಸ್ ಎರಚಿದ್ದ. ಈ ವೇಳೆ, ಸ್ಥಳದಲ್ಲಿ ಸಣ್ಣಪುಟ್ಟ ಹೊಡೆದಾಟವು ಆಗಿತ್ತು. ಅಲ್ಲದೇ ಸಿಸಿಟಿವಿ ಆರೋಪಿ ಕೃತ್ಯ ಬಯಲಾಗಿತ್ತು. ಕೆಮಿಕಲ್ಸ್ ಹಾಕಿದರೆ ಜ್ಞಾನೇಂದ್ರ ಕರಗ ಹೊರುವುದಿಲ್ಲ ಎಂದು ಭಾವಿಸಿಕೊಂಡಿದ್ದ. ಅಲ್ಲದೇ ಅವರ ಕೆಲಸವನ್ನ ಕಸಿಯುವ ಉದ್ದೇಶವನ್ನು ಆದಿನಾರಾಯಣ ಹೊಂದಿದ್ದ. ಸದ್ಯ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಈ ಪ್ರಕರಣ ಕುರಿತು ಬೆಂಗಳೂರು ನಗರ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಮಾತನಾಡಿ, ಪ್ರಮುಖವಾಗಿ ಕರಗ ಹೊರುವ ಪೂಜಾರಿ ಮೇಲೆ ರಾಸಾಯನಿಕ ಪದಾರ್ಥವನ್ನು ಎರಚಿದ್ದಾರೆ. ಈ ಮೂಲಕ ಅವರಿಗೆ ಗಾಯಗೊಳಿಸಲು ಆರೋಪಿ ಪ್ರಯತ್ನ ಪಟ್ಟಿದ್ದಾನೆ. ಈ ಬಗ್ಗೆ ದೂರು ದಾಖಲಾಗಿತ್ತು. ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಕರಗ ಹೊರುವ ವಿಚಾರದಲ್ಲಿ ಅವರ ಮಧ್ಯೆ ವಿವಾದಗಳಿವೆ. ಆ ಕಾರಣಕ್ಕಾಗಿ ಈ ರೀತಿಯ ಘಟನೆ ನಡೆದಿದೆ. ಪ್ರಾಥಮಿಕ ತನಿಖೆ ವೇಳೆ ಈ ವಿಷಯ ತಿಳಿದುಬಂದಿದೆ. ರಾಸಾಯನಿಕ ಪದಾರ್ಥ ಎರಚಿರುವುದರ ಬಗ್ಗೆ ಇನ್ನು ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಆರೋಪಿಯೊಬ್ಬನನ್ನು ಬಂಧನ ಮಾಡಿದ್ದೇವೆ. ಅವರೆಲ್ಲರೂ ದೇವಸ್ಥಾನಕ್ಕೆ ಸಂಬಂಧಿಸಿದ ವ್ಯಕ್ತಿಗಳಾಗಿದ್ದು, ಯಾರು ಕರಗ ಹೊರಬೇಕು ಎಂದು ನಿಶ್ಚಿಯ ಮಾಡುವುದು ದೇವಸ್ಥಾನಕ್ಕೆ ಬಿಟ್ಟ ವಿಚಾರ. ಪಾಳೆಯ ಪ್ರಕಾರ ಕರಗ ಹೊರುವ ಪದ್ಧತಿಯಿದೆ. ಈ ವಿಚಾರಕ್ಕೆ ಇಬ್ಬರ ಮಧ್ಯೆ ವಿವಾದ ನಡೆದಿತ್ತು. ಹೀಗಾಗಿ ಈ ಘಟನೆ ನಡೆದಿದ್ದು, ಈ ಕುರಿತು ನಾವು ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.