ಬೆಂಗಳೂರು: ಇಂದು ಬಿಎಂಟಿಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಕಂಪನಿ ಉದ್ಯೋಗಿವೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ವೈಟ್ ಫೀಲ್ಡ್ ಮುಖ್ಯರಸ್ತೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟಿರುವ ಯುವಕ ವಿಘ್ನ ಸಾಗರ್(೨೪) ಎಂದು ತಿಳಿದುಬಂದಿದೆ. ಮೂಲತಃ ಬಳ್ಳಾರಿಯವನಾದ ವಿಘ್ನ ಸಾಗರ್ ವೈಟ್ ಫೀಲ್ಡ್ ನ ಖಾಸಗಿ ಕಂಪನಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡು ಬೆಂಗಳೂರು ಗ್ರಾಮಾಂತರ ಹೊಸಕೋಟೆ ಪಟ್ಟಣದಲ್ಲಿ ನೆಲೆಸಿದ್ದರು.
ಎಂದಿನಂತೆ ಇಂದು ಬೆಳಗ್ಗೆ ತಮ್ಮ ಬೈಕ್ ನಲ್ಲಿ ಕೆಲಸಕ್ಕೆ ಬರುವಾಗ ವೈಟ್ ಫೀಲ್ಡ್ ಮುಖ್ಯರಸ್ತೆಯ ಕಾಡುಗೋಡಿಯ ಸಫಲ್ ಆಯಿಲ್ ಕಂಪನಿ ಬಳಿ ಹಿಂಬದಿಯಿಂದ ಬಿಎಂಟಿಸಿ ಬಸ್ ಇವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸದಿಂದ ವಿಘ್ನ ಸಾಗರ್ ರಸ್ತೆಗೆ ಬಿದ್ದಾಗ ತಲೆಯ ಮೇಲೆ ಬಸ್ ಚಕ್ರ ಹರಿದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ವಿಘ್ನ ಸಾಗರ್ ಪೋಷಕರ ಇಬ್ಬರು ಮಕ್ಕಳಲ್ಲಿ ದೊಡ್ಡವನಾಗಿದ್ದು, ಪೋಷಕರಿಗೆ ಆಧಾರ ಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಪೋಷಕರಿಗೆ ಆಕಾಶವೇ ಕಳಚಿ ತಲೆ ಬಿದ್ದಂತಾಗಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಸದ್ಯ ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.