ಬೆಂಗಳೂರು: ಸಾರಿಗೆ ನೌಕರರ ಸಾಲು-ಸಾಲು ಆತ್ಮಹತ್ಯೆಯನ್ನು ಖಂಡಿಸಿ, ಸಚಿವ ಶ್ರೀರಾಮುಲು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿತು. ಆಪ್ನ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಪ್ರತಿಭಟನೆಗೂ ಮುನ್ನ ಪೃಥ್ವಿ ರೆಡ್ಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಅಸಮರ್ಥ ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಯೋಗ್ಯರಿಗೆ ಸಾರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.
15 ದಿನದಲ್ಲಿ ಆರು ಜನ ಆತ್ಮಹತ್ಯೆ: ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿ ರೆಡ್ಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ 35ಕ್ಕೂ ಹೆಚ್ಚು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 15 ದಿನಗಳಲ್ಲಿ ಆರು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗೆ ಸಾಲು-ಸಾಲು ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ಸಚಿವರು ಹಾಗೂ ಅಧಿಕಾರಿಗಳು ಮೃತ ನೌಕರರ ಶವ ನೋಡಲು, ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಕೂಡ ತೆರಳದಿರುವುದು ನಿಜಕ್ಕೂ ಅಮಾನವೀಯ ಎಂದರು.
ಆತ್ಮಹತ್ಯೆಗಳನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯು ಪ್ರತಿಭಟನೆ ಮಾಡಿದ ನಂತರ, ಸರ್ಕಾರ ಡಿಪೋ ಮ್ಯಾನೇಜರ್ರೊಬ್ಬರನ್ನು ಅಮಾನತು ಮಾಡಿ ಸುಮ್ಮನಾಗಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸಲು ಸಾರಿಗೆ ಸಚಿವರಿಗೆ ಸಾಧ್ಯವಾಗದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಸೇವೆಯಲ್ಲಿ ಸಾರಿಗೆ ನೌಕರರ ಪಾತ್ರ ಮುಖ್ಯ: ಜನಸೇವೆಯಲ್ಲಿ ಸಾರಿಗೆ ನೌಕರರ ಪಾತ್ರ ಮಹತ್ವದಾಗಿದೆ. ಅವರಿಂದಾಗಿಯೇ ಇಂದು ಜನಸಾಮಾನ್ಯರಿಗೆ ಪ್ರಯಾಣ ಸಾಧ್ಯವಾಗುತ್ತಿದೆ. ಆದರೆ ಸರ್ಕಾರವು ಅವರನ್ನು ಶತ್ರುಗಳಂತೆ ನೋಡುತ್ತಿದೆ. ಸಾರಿಗೆ ನೌಕರರಿಗೆ ಅನ್ಯಾಯವಾಗುತ್ತಿರುವುದು ನೋಡಿಕೊಂಡು ಆಮ್ ಆದ್ಮಿ ಪಾರ್ಟಿ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಪೃಥ್ವಿ ರೆಡ್ಡಿ ಹೇಳಿದರು.
ಸರ್ಕಾರವು ಶೀಘ್ರವೇ ಶ್ರೀರಾಮುಲು ಅವರನ್ನು ಸಂಪುಟದಿಂದ ವಜಾ ಮಾಡಿ, ಸಂತ್ರಸ್ತ ಸಾರಿಗೆ ನೌಕರರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಸಾರಿಗೆ ನೌಕರರ ಹಿತ ಕಾಪಾಡುವಂತಹ ನೀತಿಯನ್ನು ರೂಪಿಸಲು, ತಜ್ಞರ ಸಮಿತಿ ರಚಿಸಬೇಕು ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.
ನೌಕರರಿಂದ ಡೆತ್ ನೋಟ್: ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ಸಾರಿಗೆ ನೌಕರರ ಪೈಕಿ ಅನೇಕರು ಡೆತ್ ನೋಟ್ ಬರೆದಿಟ್ಟಿದ್ದಾರೆ. ಸಾವಿಗೆ ಇಲಾಖೆಯಲ್ಲಿನ ಕಿರುಕುಳವೇ ಕಾರಣವೆಂದು ಅದರಲ್ಲಿ ಸ್ಪಷ್ಟವಾಗಿ ಆರೋಪಿಸಿದ್ದಾರೆ. ಸಚಿವರು ಹಾಗೂ ಉನ್ನತ ಅಧಿಕಾರಿಗಳ ಅಕ್ರಮಗಳಿಂದಾಗಿ ಪ್ರಾಮಾಣಿಕ ನೌಕರರು ಮಾನಸಿಕ ಕಿರುಕುಳ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಸಾರಿಗೆ ನೌಕರರ ಆತ್ಮಹತ್ಯೆ: ಶ್ರೀರಾಮುಲು ರಾಜೀನಾಮೆಗೆ ಆಮ್ ಆದ್ಮಿ ಒತ್ತಾಯ..
2020 ಹಾಗೂ 2021ರಲ್ಲಿ ಕೋವಿಡ್‌ನಿಂದಾಗಿ 110ಕ್ಕೂ ಹೆಚ್ಚು ಸಾರಿಗೆ ನೌಕರರು ಬಲಿಯಾಗಿದ್ದಾರೆ. ಇವರ ಕುಟುಂಬಗಳಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತಾದರೂ ಈವರೆಗೆ ಕೇವಲ ಏಳು ಕುಟುಂಬಗಳಿಗೆ ಮಾತ್ರ ಪರಿಹಾರ ದೊರೆತಿದೆ. ಸಾರಿಗೆ ಸಚಿವ ಶ್ರೀರಾಮುಲು ಅವರು ಕೋವಿಡ್ ಪರಿಹಾರ ದೊರಕಿಸಿಕೊಡುವುದರಲ್ಲೂ ವಿಫಲರಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.