ಬೆಂಗಳೂರು: ಸಾರ್ ನಮ್ಮನೆ ನೋಡೋಕೆ ಬನ್ನಿ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪರಿಪರಿಯಾಗಿ ಬೇಡಿ ಅವಲತ್ತುಕೊಂಡ ಮಹಿಳೆಯೊಬ್ಬರಿಗೆ ಸಚಿವ ಮುನಿರತ್ನ ಸಮಾಧಾನ ಹೇಳಿದ್ದು, ಮಳೆನೀರು ಸಮಸ್ಯೆಗೆ ಪರಿಹಾರ ಕಲ್ಪಿಸಲಾಗದಿದ್ದರೆ ನಾನು ಮತ್ತೆ ಚುನಾವಣೆಗೆ ನಿಲ್ಲುವುದೇ ಇಲ್ಲ ಎಂದು ಶಪಥ ಮಾಡಿದ ಘಟನೆ ಇಂದು ನಡೆದಿದೆ.
ಆರ್ ಆರ್ ನಗರದ ಐಡಿಯಲ್ಸ್ ಬಡಾವಣೆಯಲ್ಲಿ ಮಳೆಗೆ ನದಿಯಂತಾಗಿದ್ದ ರಸ್ತೆಗಳು, ಕೆರೆಯಂತಾಗಿದ್ದ ಬಡಾವಣೆಗಳ ವೀಕ್ಷಣೆಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಮುನಿರತ್ನ ಮೇಲೆ ಮುಗಿಬಿದ್ದ ಸ್ಥಳೀಯರು ಅಸಮಧಾನ, ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ವರ್ಷವೂ ಇಂತಹ ಸನ್ನಿವೇಶ ಎದುರಿಸುತ್ತಿದ್ದರೂ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಆಗಿಲ್ಲ ಎಂದು ಕಿಡಿಕಾರಿದರು. ಎಲ್ಲರನ್ನೂ ಸಿಎಂ ಸಮಾಧಾನ ಪಡಿಸಿ ಸಮಸ್ಯೆ ಪರಿಹಾರದ ಭರವಸೆ ನೀಡಿದರು.
![ಆರ್ ಆರ್ ನಗರದ ಐಡಿಯಲ್ಸ್ ಬಡಾವಣೆಗೆ ಸಿಎಂ ಭೇಟಿ](https://etvbharatimages.akamaized.net/etvbharat/prod-images/kn-bng-07-munirathna-assurance-script-7208080_18052022161450_1805f_1652870690_262.jpg)
ಈ ವೇಳೆ ಮತ್ತೊಂದು ಪ್ರದೇಶಕ್ಕೆ ತೆರಳಲು ಕಾರು ಏರಲು ಮುಂದಾದ ಮುಖ್ಯಮಂತ್ರಿಗಳಿಗೆ ಮಹಿಳೆಯೊಬ್ಬರು ಕಣ್ಣೀರು ಹಾಕುತ್ತಾ ಓಡೋಡಿ ಬಂದು ನಮ್ಮ ಮನೆಗೆ ಬಂದು ಅನಾಹುತ ವೀಕ್ಷಿಸಿ ಎಂದು ಅಂಗಲಾಚಿದರು. ನಮ್ಮ ಜೀವನವೇ ಮುಳುಗಿಹೋಗಿದೆ ಬಂದು ಅವಲತ್ತುಕೊಂಡರು. ಈ ವೇಳೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿ ಅಲ್ಲಿಂದ ಸಿಎಂ ತೆರಳಿದರು.
ನಂತರ ಸ್ಥಳದಲ್ಲಿದ್ದ ಸಚಿವ ಮುನಿರತ್ನ ಅವರನ್ನು ಮುತ್ತಿಕೊಂಡ ಸ್ಥಳೀಯರು ಸಮಸ್ಯೆಗಳನ್ನ ತೋಡಿಕೊಂಡರು. ಮಳೆಹಾನಿ ಸಮಸ್ಯೆ ಬಗ್ಗೆ ಅಳಲು ತೋಡಿಕೊಂಡ ಸ್ಥಳೀಯ ನಿವಾಸಿಗಳಿಗೆ ಸಚಿವ ಮುನಿರತ್ನ ಶಾಶ್ವತ ಪರಿಹಾರದ ಅಭಯ ನೀಡಿದರು. ಈ ಭಾಗವನ್ನು ಅಭಿವೃದ್ಧಿ ಮಾಡಿಲ್ಲವಾದರೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಸಚಿವ ಮುನಿರತ್ನ ಘೋಷಣೆ ಮಾಡಿ ಮುನ್ನಡೆದರು.