ಬೆಂಗಳೂರು: ವೇಶ್ಯಾವಾಟಿಕೆ ದಂಧೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಅಕ್ರಮ ಚಟುವಟಿಕೆ ಮಾಡುತ್ತಿದ್ದ ಮಹಿಳೆ ಮೇಲೆ ಮೊದಲ ಬಾರಿಗೆ ಸಿಸಿಬಿ ಪೊಲೀಸರು (Karnataka prevention of illegal trafficking act) ಕೆಪಿಐಟಿ ಕಾಯ್ದೆ -1985ಅಡಿ ಪ್ರಕರಣ ದಾಖಲು ಮಾಡಿ ಬಂಧಿಸಿದ್ದಾರೆ.
ಈ ಕಾಯ್ದೆಯಡಿ ಬಂಧನವಾದ ಮೊದಲ ಮಹಿಳೆ ಈಕೆಯೇ ಆಗಿದ್ದಾಳೆ. 2007ರಿಂದ ಈಕೆ ಕಾಟನ್ ಪೇಟೆ, ಹೆಚ್ಎಸ್ಆರ್ ಲೇ ಔಟ್, ಮಾರತಹಳ್ಳಿ, ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿವಿಧ ಹೆಸರಿನಲ್ಲಿ ಮಸಾಜ್ ಪಾರ್ಲರ್ , ಸ್ಪಾ, ಸಲೂನ್ ತೆರೆದು ಹೊರ ರಾಜ್ಯದ ಯುವತಿಯರನ್ನ ಉದ್ಯೋಗದ ನೆಪದಲ್ಲಿ ಮಾನವ ಕಳ್ಳ ಸಾಗಣೆ ಮುಖಾಂತರ ಕರೆತಂದು ದಂಧೆ ಮಾಡುತ್ತಿದ್ದಳು.
ಈ ಹಿಂದೆ ಈಕೆಯನ್ನ ಸಿಸಿಬಿ ದಸ್ತಗಿರಿ ಮಾಡಿದಾಗ ಜಾಮೀನು ಪಡೆದು ಹೊರ ಬಂದಿದ್ದಳು. ನಂತರ ನ್ಯಾಯಾಲಯದ ನಿಯಮ ಪಾಲನೆ ಮಾಡದೆ ವಿಚಾರಣೆಗೂ ಹಾಜರಾಗದೆ ತಲೆ ಮರೆಸಿಕೊಂಡಿದ್ದಳು. ಪೊಲೀಸರು ಹುಡುಕಾಟ ಮಾಡಿದಾಗ ಮನೆಯ ವಿಳಾಸ ಬದಲಾವಣೆ ಮಾಡಿ ಮತ್ತೆ ದಂಧೆ ಶುರು ಮಾಡಿದ್ದಳು. ಹೀಗಾಗಿ ಸಿಸಿಬಿ ಪೊಲೀಸರು ದಾಳಿ ಮಾಡಿ ಈಕೆಯ ಮೇಲೆ 30 ಪ್ರಕರಣ ದಾಖಲಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಮಾನವ ಕಳ್ಳಸಾಗಣೆ ಹಾಗೂ ವೇಶ್ಯಾವಟಿಕೆ ದಂಧೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈಕೆಯ ಮೇಲೆ ಕೆಪಿಐಟಿ ಪ್ರಕರಣ ದಾಖಲು ಮಾಡಲಾಗಿದೆ. ಈ ಕಾಯ್ದೆಯ ಅನ್ವಯ ಈಕೆಗೆ ಒಂದು ವರ್ಷದವರೆಗೆ ಜಾಮೀನು ಸಿಗುವುದಿಲ್ಲ.