ಬೆಂಗಳೂರು: ರಸ್ತೆಯಲ್ಲಿ ಸೋಮವಾರ ರಾತ್ರಿ 8.30ರ ಸುಮಾರಿಗೆ ಬೈಕಿನಲ್ಲಿ ಬರುತ್ತಿದ್ದ ಮೆಣಸಿಗನಹಳ್ಳಿ ಹೇಮಂತ್ (26)ನನ್ನು ಕಾರಿನಿಂದ ಡಿಕ್ಕಿ ಹೊಡೆದು, ನಾಲ್ಕೈದು ಮಂದಿ ಅಟ್ಟಾಡಿಸಿ, ಯುವಕನನ್ನು ಕೊಂದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ಈ ಕೊಲೆ ಸುದ್ದಿ ತಿಳಿದ ಸುತ್ತಲ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿ ಹಾರ್ಡ್ವೇರ್ ಅಂಗಡಿ ಕೆಲಸ ಮುಗಿಸಿದ ಹೇಮಂತ್ ತನ್ನ ಬೈಕ್ ಅನ್ನು ತಮಿಳುನಾಡಿನ ಕನಮನಹಳ್ಳಿಯ ಚಿಕ್ಕಮ್ಮನ ಮನೆಯಲ್ಲಿ ಬಿಟ್ಟಿದ್ದಾರೆ. ಬಳಿಕ ಸ್ಕೂಟಿ ಮೂಲಕ ಹೊಸ ಮನೆಗೆ ಎರಡು ಟೈಲ್ಸ್ ಬಾಕ್ಸ್ ತರಲು ಹೋಗಿದ್ದಾನೆ. ನಗರದ ಆಶ್ರಯ ದಿನ್ನೆ ಮೂಲಕ ಮೆಣಸಿಗನಹಳ್ಳಿ ಮಾರ್ಗದ ವಣಕನಹಳ್ಳಿ ಶೀನಪ್ಪ ಕೋಳಿಫಾರಂ ಮುಂಭಾಗ ಬರುತ್ತಿರುವ ಸಂದರ್ಭದಲ್ಲಿ ಕಾರಿನಲ್ಲಿ ಎದುರಾದ ಯುವಕರ ಗ್ಯಾಂಗ್ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಹೇಮಂತ್ ರಸ್ತೆ ಮೇಲೆ ಬಿದ್ದಿದ್ದಾನೆ. ಅಪಾಯ ಎದುರಾಗಿದ್ದನ್ನು ಕಂಡ ಹೇಮಂತ್ ಕೂಗುತ್ತಾ ಓಡಿದ್ದಾನೆ. ಈ ವೇಳೆ ಆರೋಪಿಗಳ ಗ್ಯಾಂಗ್ ಹೇಮಂತ್ನನ್ನು ಅಟ್ಟಾಡಿಸಿಕೊಂಡು ಹೋಗಿದೆ.
ಆರೋಪಿಗಳ ಕೈಯಿಂದ ತಪ್ಪಿಸಿಕೊಂಡು ಉಳುಮೆ ಮಾಡಿದ್ದ ಹೊಲದಲ್ಲಿ ಹೇಮಂತ್ ಓಡಿದ್ದಾನೆ. ಈ ಗ್ಯಾಂಗ್ನವರು ಹೇಮಂತ್ನನ್ನು ಹಿಂಬಾಲಿಸಿ ಡ್ರ್ಯಾಗರ್ನಿಂದ ಹಲವು ಬಾರಿ ಇರಿದಿದ್ದಾರೆ. ಕಿರುಚಿದ ಶಬ್ಧ ಕೇಳಿ ಹತ್ತಿರದ ತೋಟದ ಮನೆಯ ಯುವಕರು ಓಡಿ ಬಂದಿದ್ದಾರೆ. ಅಷ್ಟರಲ್ಲಿ ಗ್ಯಾಂಗ್ ಪರಾರಿಯಾಗಿದೆ. ಆಗ ಹೇಮಂತ್ ಯಾರೋ ಅಪರಿಚಿತರು ತನಗೆ ಇರಿದು ವಣಕನಹಳ್ಳಿ ಕಡೆ ಕಾರಿನಲ್ಲಿ ಓಡಿದ್ದಾರೆಂದು ಸ್ಥಳೀಯ ಜನರಿಗೆ ತಿಳಿಸಿದ್ದಾನೆ.
ಸ್ಥಳೀಯರು ತಕ್ಷಣ ಆನೇಕಲ್ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಹೇಮಂತ್ನನ್ನು ಆನೇಕಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಹೇಮಂತ್ಗೆ ಹೆಚ್ಚು ರಕ್ತಸ್ರಾವ ಆಗುತ್ತಿದ್ದರಿಂದ ಬೊಮ್ಮಸಂದ್ರದ ಸ್ಪರ್ಶ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಗ ಆತ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ.
ತಮ್ಮ ಗ್ರಾಮದಲ್ಲಿ ಹೇಮಂತ್ ಕುರಿತು ಜನರಿಗೆ ಒಳ್ಳೆ ಅಭಿಪ್ರಾಯವಿದೆ. ಆದರೆ ಬರ್ಬರವಾಗಿ ಕೊಲೆಯಾಗಿದ್ದು ಯಾಕೆ, ಈ ಕೊಲೆ ಮಾಡಿದ್ದು ಯಾರು ಎನ್ನುವುದು ಆನೇಕಲ್ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮತ್ತು ಬೆಂ.ಗ್ರಾ ಎಎಸ್ಪಿ ಎಂ ಎಲ್ ಪುರುಷೋತ್ತಮ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಲ್ಲಿನಿಂದ ಜಜ್ಜಿ ಕೊಲೆ: ಉತ್ತರ ಭಾರತ ಮೂಲದ ವ್ಯಕ್ತಿಯೋರ್ವನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸರ್ಜಾಪುರ ಪಂಡಿತನ ಅಗ್ರಹಾರದ ಬಳಿಯ ನಿಸರ್ಗ ಬಡಾವಣೆಯಲ್ಲಿ ಕೊಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉತ್ತರ ಭಾರತ ಮೂಲದ ಸಲೀಂ ಮಹಮದ್ನ ಮೇಲೆ ಹಂತಕರು ಕಲ್ಲು ಎತ್ತಿಹಾಕಿ, ಜಜ್ಜಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೊಲೆಗೂ ಮುನ್ನ ಆ ವ್ಯಕ್ತಿಗೆ ಮದ್ಯದೊಂದಿಗೆ ಮತ್ತು ಬರುವ ಔಷಧಿ ಬೆರೆಸಿ ಕುಡಿಸಿದ್ದಾರೆ. ಬಳಿಕ ಆತನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ಸರ್ಜಾಪುರ-ಮಾಲೂರು ರಸ್ತೆಯ ರಾಜೀವ್ ನಗರದ ನಿವಾಸಿ ಚರಣ್ ಮತ್ತು ಹೊಸಕೋಟೆ ತಾಲೂಕಿನ ತತ್ತನೂರಿನ ನಾರಾಯಣಸ್ವಾಮಿ ಎಂದು ಗುರುತಿಸಲಾಗಿದೆ. ಸರ್ಜಾಪುರ ಇನ್ಸ್ಪೆಕ್ಟರ್ ಮಂಜು ಎಸ್ಎಸ್ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಓದಿ: ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಮಹಿಳೆಯ ಬಂಧನ