ಬೆಂಗಳೂರು: ಸಣ್ಣ ಜ್ವರ ಎಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ಆಸ್ಪತ್ರೆಯವರು ಲಕ್ಷಾಂತರ ರೂಪಾಯಿ ಬಿಲ್ ಹಾಕಿದ್ದು, ಚಿಕಿತ್ಸೆ ವಿಫಲವಾಗಿ ವ್ಯಕ್ತಿ ಸಾವಿಗೀಡಾಗಿದ್ದಾರೆ. ಆದರೂ, ಆಸ್ಪತ್ರೆಯವರು ಬಿಲ್ ಕಟ್ಟದ ಹೊರತು ಶವ ಕೊಡಲು ನಿರಾಕರಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ನಗರದ ಆರ್ ಪಿ ಸಿ ಲೇಔಟ್ ನ ನಿವಾಸಿ ನಾಗರಾಜ್ ವಿ ಎಂಬುವವರಿಗೆ ಸಣ್ಣ ಜ್ವರ ಕಾಣಿಸಿಕೊಂಡಿದೆ. ಇದಕ್ಕೂ ಮೊದಲ ಮನೆಯ ಇತರೆ ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ನಿರ್ಲಕ್ಷ್ಯ ಮಾಡದೇ ನಾಗರಾಜ್ ರವರು ಕುಮಾರಸ್ವಾಮಿ ಲೇಔಟ್ ನಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಳಿಕ ಆಸ್ಪತ್ರೆಯವರು, ಉಸಿರಾಟದ ತೊಂದರೆ, ಕಿಡ್ನಿ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಇರುವುದಾಗಿ ಹೇಳಿ ಲಕ್ಷ ಲಕ್ಷ ಬಿಲ್ ಹಾಕಿದ್ದಾರೆ. ಈ ವೇಳೆ ಕೊರೊನಾ ಪಾಸಿಟಿವ್ ಇರುವುದಾಗಿ ಹೇಳಿದ್ದಾರೆ. ಕುಟುಂಬದವರು ಪ್ರತಿ ಸಲ ಆರೋಗ್ಯದ ಬಗ್ಗೆ ವಿಚಾರಿಸಿದಾಗ ಕ್ರಿಟಿಕಲ್ ಕಂಡೀಷನ್ ಅಂತ ಹೇಳಿ ದಿನ ಕಳೆದಿದ್ದಾರೆ. ಜುಲೈ 19 ರಂದು ದಾಖಲು ಮಾಡಿಕೊಂಡ ಆಸ್ಪತ್ರೆಯವರು, ಯಾವುದರ ಬಗ್ಗೆಯೂ ಸರಿಯಾದ ಮಾಹಿತಿ ಕೊಡದೇ ದಿಢೀರ್ ಅಂತ ಐಸಿಯು ವೆಂಟಿಲೇಟರ್ ನಲ್ಲಿ ಇರುವುದಾಗಿ ತಿಳಿದ್ದಾರೆ. ಬಳಿಕ ಆಗಸ್ಟ್ 7 ರಂದು ಮೃತರಾಗಿರುವುದಾಗಿ ಹೇಳಿ 9 ಲಕ್ಷ ಬಿಲ್ ಕಟ್ಟಿ ದೇಹ ಪಡೆಯುವಂತೆ ಹೇಳಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.
ಇತ್ತ ಮನೆಯ ಕುಟುಂಬ ಸದಸ್ಯರಿಗೆಲ್ಲ ಕೊರೊನಾ ಪಾಸಿಟಿವ್ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗರಾಜ್ ಅವರ ಸಹೋದರ ಶ್ರೀನಿವಾಸ್ ವಿ ಅಂಧರರಾಗಿದ್ದು, ತಮ್ಮನ ಸಾವಿನ ಸುದ್ದಿ ಕೇಳಿ ಕಂಗಾಲಾಗಿದ್ದಾರೆ. ಆಗಸ್ಟ್ 7 ರಂದು ಮೃತ ಪಟ್ಟ ವಿಷಯ ತಿಳಿದಿದ್ದು, ಇದೀಗ ಎರಡು ದಿನಗಳು ಕಳೆದರು ಮೃತ ದೇಹ ನೀಡದೇ ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.