ಬೆಂಗಳೂರು: ತನ್ನ ಗಂಡ ವರದಕ್ಷಿಣೆ ನೀಡಬೇಕೆಂದು ಕಿರುಕುಳ ನೀಡುತ್ತಿರುವುದಾಗಿ ಐಪಿಎಸ್ ಮಹಿಳಾ ಅಧಿಕಾರಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಐಪಿಎಸ್ ಅಧಿಕಾರಿ ವರ್ಟಿಕಾ ಕಟಿಯಾರ್ ನೀಡಿದ ದೂರಿನ ಮೇರೆಗೆ ಪತಿ ನಿತೀನ್ ಸುಭಾಶ್ ಹಾಗೂ ಕುಟುಂಬಸ್ಥರು ಸೇರಿದಂತೆ ಒಟ್ಟು ಏಳು ಮಂದಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
2011ರಲ್ಲಿ ಸಪ್ತಪದಿ ತುಳಿದಿದ್ದ ವರ್ಟಿಕಾ ಕಟಿಯಾರ್-ನಿತೀನ್ ಸುಭಾಶ್ :
2009ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಆಗಿರುವ ವರ್ತಿಕಾ 2011ರಲ್ಲಿ ಭಾರತೀಯ ವಿದೇಶಾಂಗ ಇಲಾಖೆಯ (ಐಎಫ್ ಎಸ್) ಅಧಿಕಾರಿ ನಿತಿನ್ ಸುಬಾಶ್ ಅವರೊಂದಿಗೆ ವಿವಾಹವಾಗಿದ್ದರು. ನಿತಿನ್ ದೆಹಲಿಯಲ್ಲಿ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
2016ರಲ್ಲಿ ಹಲ್ಲೆ ಮಾಡಿ ಕೈ ಮುರಿದಿದ್ದ ನಿತೀನ್ ಸುಭಾಶ್ :
ಪತಿ ಕುಡಿಯುವ ಮತ್ತು ಧೂಮಪಾನ ಮಾಡುವ ಅತಿಯಾದ ಚಟ ಬೆಳೆಸಿಕೊಂಡಿದ್ದ. ಇದನ್ನು ತ್ಯಜಿಸುವಂತೆ ಹಲವು ಬಾರಿ ಹೇಳಿದಾಗಲೂ ಜಗಳ ಮಾಡಿ ಹಲ್ಲೆ ಮಾಡಿದ್ದಾನೆ. 2016ರಲ್ಲಿ ಇದೇ ವಿಚಾರಕ್ಕೆ ಹಲ್ಲೆ ಮಾಡಿದಾಗ ಕೈ ಮುರಿದು ಹೋಗಿತ್ತು. ದೀಪಾವಳಿಗೆ ಉಡುಗೊರೆ ನೀಡಲಿಲ್ಲ ಎಂದು ವಿಚ್ಚೇದನ ನೀಡುವುದಾಗಿ ಬೆದರಿಕೆ ಹಾಕಿದ್ದರು. ಮದುವೆಯ ಸಂದರ್ಭದಲ್ಲಿ ಚಿನ್ನಾಭರಣ ಪಡೆದುಕೊಂಡಿದ್ದಾರೆ. ಅಲ್ಲದೇ ಹಣಕ್ಕಾಗಿ ಪದೇ ಪದೆ ಪೀಡಿಸುತ್ತಿರುವುದಾಗಿ ಐಪಿಎಸ್ ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.
ಓದಿ : ಪ್ರಿಯತಮೆ, ಆಕೆಯ ತಾಯಿಗೆ ಸೀಮೆಎಣ್ಣೆ ಸುರಿದು ತಾನೂ ಬೆಂಕಿ ಹಚ್ಚಿಕೊಂಡ ಪ್ರೇಮಿ!
ಐಪಿಎಸ್ ಮಹಿಳಾ ಅಧಿಕಾರಿ ನೀಡಿದ ದೂರಿನಲ್ಲಿ ಏನಿದೆ..?
ಸಂತ್ರಸ್ಥೆಯ ಅಜ್ಜಿಯ ಬಳಿ ಪತಿ ಐದು ಲಕ್ಷದ ಚೆಕ್ ಪಡೆದಿದ್ದರು. ಅಲ್ಲದೇ ಮನೆ ಮಾಡುವಾಗ 35 ಲಕ್ಷ ಹಣ ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪತಿ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ, ಹಲ್ಲೆ, ಜೀವ ಬೆದರಿಕೆ ಆರೋಪದಡಿ ಕಬ್ಬನ್ ಪಾರ್ಕ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.