ಬೆಂಗಳೂರು: 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ನಿಗದಿಯಾಗಿದೆ. 2023ರ ಜನವರಿ 6ರಿಂದ 8ರವರೆಗೆ ಮೂರು ದಿನಗಳ ಕಾಲ ಸಮ್ಮೇಳನ ನಡೆಸುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ.
ಕನ್ನಡ ಮತ್ತು ಸಂಸ್ಕ್ರತಿ, ಇಂಧನ ಸಚಿವ ವಿ ಸುನೀಲ್ ಕುಮಾರ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಪೂರ್ವಭಾವಿ ಸಭೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರ ಅನುಮೋದನೆ ಪಡೆದು ಸಚಿವ ಸುನೀಲ್ ಕುಮಾರ್ ದಿನಾಂಕ ಘೋಷಣೆ ಮಾಡಿದ್ದಾರೆ.
ನಂತರ ಮಾತನಾಡಿದ ಸಚಿವ ಸುನೀಲ್ ಕುಮಾರ್ ಅವರು, ಈ ಸಮ್ಮೇಳನದಲ್ಲಿ 8 ರಿಂದ 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಬಹಳ ಅದ್ದೂರಿಯಾಗಿ 86ನೇ ಸಾಹಿತ್ಯ ಸಮ್ಮೇಳನವನ್ನು ನಡೆಸುವುದಕ್ಕೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಹಾಗೂ ಸ್ವಯಂ ಸೇವಕರ ಜತೆಗೆ ಚರ್ಚೆ ನಡೆಸುವುದಕ್ಕಾಗಿ ಅಕ್ಟೋಬರ್ 20ರಂದು ಹಾವೇರಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಲಾಗುವುದು. ಯಾವುದೇ ನ್ಯೂನತೆ ಇಲ್ಲದಂತೆ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ತಿಳಿಸಿದರು.
![86th Kannada Sahitya Sammelna form January 6th](https://etvbharatimages.akamaized.net/etvbharat/prod-images/kn-bng-04-minister-snailkumar-meeting-reaction-script-7208083_12102022192240_1210f_1665582760_501.jpg)
ಸಮ್ಮೇಳನ ಹಿನ್ನೆಲೆಯಲ್ಲಿ 45 ದಿನಗಳ ಕಾಲ ಕನ್ನಡ ರಥ ಇಡಿ ರಾಜ್ಯಾದ್ಯಂತ ಮೆರವಣಿಗೆ ನಡೆಸುತ್ತದೆ. 30ರಿಂದ 40 ಸಾವಿರ ಜನರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ನಿತ್ಯ 2.50 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಗಿರುವುದರಿಂದ 86 ಸಾಧಕರಿಗೆ ಈ ಬಾರಿ ಸನ್ಮಾನಿಸಲಾಗುತ್ತದೆ ಎಂದು ಹೇಳಿದರು.
ಸಮ್ಮೇಳನದ ಭಾಗವಾಗಿ 20ಕ್ಕೂ ಹೆಚ್ಚು ಉಪಸಮಿತಿಗಳನ್ನು ರಚನೆ ಮಾಡಲಾಗುತ್ತದೆ. ನಾನಾ ಗೋಷ್ಠಿಗಳು, ಪುಸ್ತಕ ಪ್ರದರ್ಶನದ ಜತೆಗೆ ಸಾಹಿತ್ಯಕ್ಕೆ ಸಂಬಂಧಪಟ್ಟ ಅನೇಕ ಚಟುವಟಿಕೆಗಳು ನಡೆಯುತ್ತವೆ ಎಂದು ಹೇಳಿದರು.
ಉದ್ಘಾಟನೆಗೆ 50 ಸಾವಿರ ಜನ: ಉದ್ಘಾಟನಾ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುವುದು. ಸುಮಾರು 50 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯ ಇರುವ ಬೃಹತ್ ಸಭಾಂಗಣ ನಿರ್ಮಿಸಲಾಗುವುದು. ಹಿಂದೆಂದೂ ಕಾಣದಷ್ಟು ಅಚ್ಚುಕಟ್ಟಾಗಿ ಸಮ್ಮೇಳನ ಯಶಸ್ವಿಗೊಳಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಇದನ್ನೂ ಓದಿ: ಪ್ರಮುಖ ವಿಮಾನ ನಿಲ್ದಾಣಗಳನ್ನು ರಾಜ್ಯಕ್ಕೆ ವಹಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ಸರ್ಕಾರ ನಿರ್ಧಾರ!