ಬೆಂಗಳೂರು: ಅಸ್ಟರ್ ಸಂಸ್ಥೆ ಕರ್ನಾಟಕದ 2ನೇ ಹಾಗೂ 3ನೇ ದರ್ಜೆ ನಗರಗಳಲ್ಲಿ ತನ್ನ ಆಸ್ಪತ್ರೆ ತೆರೆಯಲಿದೆ. ಹಾಗೂ ಒಟ್ಟಾರೆ ದೇಶಕ್ಕೆ ಬರುವ ಬಂಡವಾಳದಲ್ಲಿ ಶೇ. 75 ರಷ್ಟು ರಾಜ್ಯಕ್ಕೆ ಸಿಗಲಿದೆ ಎಂದು ಐ ಟಿ ಬಿ ಟಿ ಸಚಿವ ಅಶ್ವತ್ಥ್ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದುಬೈ ರಾಷ್ಟ್ರದಲ್ಲಿ ನಡೆಯುತ್ತಿರುವ Expo Dubai 2020ರ ನಾಲ್ಕು ದಿನಗಳ ಪ್ರವಾಸದ ಬಳಿಕ ರಾಜ್ಯಕ್ಕೆ ಆಗುವ ಅಭಿವೃದ್ಧಿ ಬಗ್ಗೆ 'ಈಟಿವಿ ಭಾರತ' ಜತೆ ಅವರು ಮಾತನಾಡಿದರು. ಬಂಡವಾಳ ಹಾಗೂ ದುಬೈನಲ್ಲಿ ನಡೆದ ಚರ್ಚೆ ಕೇವಲ ಪತ್ರದಲ್ಲಿ ಇರುವುದಿಲ್ಲ. ಆದಷ್ಟು ಬೇಗ ಪ್ರಗತಿಯನ್ನ ನೋಡುತ್ತಿರಿ ಎಂದರು.
ಅಲ್ಲಿ ನಮಗೆ ಫೋಕಸ್ ಆನ್ ಕರ್ನಾಟಕ ಎಂಬ ಕಾರ್ಯಕ್ರಮಕ್ಕೆ ಒಂದು ವಾರಗಳ ಕಾಲ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿ ನಾವು ನಮ್ಮ ನಾಡಿನ ಸಾಧನೆಗಳನ್ನು, ಅವಕಾಶಗಳನ್ನು ಅಲ್ಲಿಗೆ ಬಂದಂತಹ ಹೂಡಿಕೆದಾರರು, ವ್ಯಾಪಾರಸ್ಥರೊಂದಿಗೆ ಹಂಚಿಕೊಂಡೆವು. ಬಂಡವಾಳಕ್ಕೆ ಸೂಕ್ತ ರಿಟರ್ನ್ ಸಿಗಬೇಕಾದರೆ ನಮ್ಮ ಕರ್ನಾಟಕವೇ ಸೂಕ್ತ ಎಂಬುದು ತಿಳಿದುಬಂದಿದೆ ಎಂದಿದ್ದಾರೆ.