ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧ ಪ್ರಕರಣ ದಿನೆ ದಿನೇ ಹೆಚ್ಚಾಗುತ್ತಿವೆ. ಸದ್ಯ ಜನವರಿ 2020 ರಿಂದ ಅಕ್ಟೋಬರ್ 2020 ರ ಹತ್ತು ತಿಂಗಳ ಅವಧಿಯಲ್ಲಿ ನಗರದ 8 ವಿಭಾಗದ ಸೈಬರ್ ಕ್ರೈಂ ಠಾಣೆಗಳಲ್ಲಿ 7,166 ಪ್ರಕರಣಗಳು ದಾಖಲಾಗಿವೆ.
ಇದರಲ್ಲಿ 8 ಸೈಬರ್ ಕ್ರೈಂ ಠಾಣೆ ಗಳ ಪೈಕಿ ವೈಟ್ ಫೀಲ್ಡ್ ಸೈಬರ್ ಠಾಣೆಯಲ್ಲಿ ಅತಿ ಹೆಚ್ಚು 1,226 ದೂರು ದಾಖಲಾಗಿದೆ. ಹಾಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಅತಿ ಕಡಿಮೆ 375 ದೂರು ದಾಖಲಾಗಿದ್ದು, ಬೇರೆ ಬೇರೆ ಪ್ರಕರಣಕ್ಕೆ ಹೋಲಿಸಿದರೆ ಸೈಬರ್ ಅಪರಾಧ ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸೈಬರ್ ಕ್ರೈಂ ಠಾಣೆಗಳಲ್ಲಿ ದಾಖಲಾಗುತ್ತಿರೋ ದೂರುಗಳ ಪೈಕಿ ಶೇ. 75 ಕ್ಕೂ ಹೆಚ್ಚು ಆನ್ಲೈನ್ ಮನಿ ಫ್ರಾಡ್ ಆಗಿದೆ. ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚು ಮಾಡುತ್ತಿದ್ದೇವೆ ಎಂದು ಕರೆ ಮಾಡಿ OTP ಪಡೆದು ಹಣ ಎಗರಿಸೋದು, OLX ನಲ್ಲಿ ನಕಲಿ ಜಾಹೀರಾತು ನೀಡಿ, ನಕಲಿ ಐಡಿ ಹಾಗೂ ಮೊಬೈಲ್ ಸಂಖ್ಯೆ ನೀಡಿ ವಂಚನೆ, ಆನ್ಲೈನ್ ನಲ್ಲಿ ಉದ್ಯೋಗ ಅವಕಾಶ ಕೊಡಿಸ್ತೇವಿ ಅಂತ ಅಕೌಂಟ್ ಗೆ ಹಣ ಹಾಕಿಸಿಕೊಂಡು ವಂಚನೆ, ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ ಅಂತ OTP ಪಡೆದು ಹಣ ಟ್ರಾನ್ಸ್ ಫರ್, ಅಪರಿಚಿತ ನಂಬರ್ ನಿಂದ ಕರೆ ಮಾಡಿ ಗಿಫ್ಟ್ ಬಂದಿದೆ, ಲೋನ್ ಕೊಡ್ತೀವಿ ಪ್ರೊಸಿಜರ್ ಕಂಪ್ಲೀಟ್ ಮಾಡಿ ಅಂತ ಹಣವನ್ನ ವಂಚನೆ, ಮ್ಯಾಟ್ರಿಮೋನಿ ದೋಖಾದಂತಹ ಪ್ರಕರಣಗಳು ಹೆಚ್ಚಾಗಿವೆ.
ಸದ್ಯ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸೈಬರ್ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ತಿಳಿಸಿದ್ದಾರೆ.