ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಾಲೇಜಿನಲ್ಲಿ ನರ್ಸಿಂಗ್ ಮಾಡುತ್ತಿರುವ 40 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಜ.25 ರಂದು ನರ್ಸಿಂಗ್ ಕಾಲೇಜು ಪ್ರಾರಂಭವಾಗಿದೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಕೇರಳದ ಮೂಲದವರಾಗಿದ್ದು, ಮೊದಲಿಗೆ ಇಬ್ಬರಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಇಬ್ಬರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಬಳಿಕ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಿದ್ದು, ಈ ವೇಳೆ 40 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಎಲ್ಲರಿಗೂ ಸೋಂಕಿನ ಲಕ್ಷಣವಿಲ್ಲದಿರುವುದರಿಂದ ಕಾಲೇಜು ಬಳಿ ಇರುವ ಪಿಜಿಯಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವವರಲ್ಲಿ 40 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಉಳಿದ 170 ವಿದ್ಯಾರ್ಥಿಗಳನ್ನು ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕೋವಿಡ್ ಸೋಂಕು ದೃಢಪಟ್ಟವರಿಗೆ ಏನಾದರೂ ಸಮಸ್ಯೆ ಆದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಲು ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
ಈ ಸಂಬಂಧ ಪಾಲಿಕೆಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸೋಂಕು ದೃಢಪಟ್ಟಿರುವ 40 ಮಂದಿಯ ಸ್ಯಾಂಪಲ್ ಅನ್ನು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿ ಪುನಃ ಪರೀಕ್ಷೆ ಮಾಡಿಸಲಾಗುವುದು. ಈ ಪೈಕಿ ಆಸ್ಪತ್ರೆ ಮುಖ್ಯಸ್ಥರ ಜೊತೆ ಈಗಾಗಲೇ ಚರ್ಚಿಸಿ ಸ್ಯಾಂಪಲ್‌ಗಳನ್ನು ಇಂದು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.
ಓದಿ: ಭಾರತದಲ್ಲಿ 1.5 ಕೋಟಿ ಸೋಂಕಿತರು ಗುಣಮುಖ.. 70 ಲಕ್ಷ ಮಂದಿಗೆ ಲಸಿಕೆ
ನಗರದಲ್ಲಿರುವ ಬಹುತೇಕ ನರ್ಸಿಂಗ್ ಕಾಲೇಜುಗಳಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳೇ ಇದ್ದಾರೆ. ಈಗಲೂ ಸಹ ಕೇರಳದಲ್ಲಿ ನಿತ್ಯ 5 ರಿಂದ 6 ಸಾವಿರ ಕೋವಿಡ್ ಕೇಸ್ಗಳು ಪತ್ತೆಯಾಗುತ್ತಿವೆ. ವಾರದ ರಜೆ ದಿನಗಳಲ್ಲಿ ವಿದ್ಯಾರ್ಥಿಗಳು ಊರಿಗೆ ತೆರಳುತ್ತಿದ್ದಾರೆ. ಈ ಸಂಬಂಧ ನಗರದಲ್ಲಿ ಎಲ್ಲಾ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ನರ್ಸಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಯಾರೂ ವ್ಯಾಕ್ಸಿನೇಷನ್ ಮಾಡಿಸಿಕೊಂಡಿಲ್ಲ. ಅವರಿಗೆಲ್ಲ ವ್ಯಾಕ್ಸಿನೇಷನ್ ಮಾಡಲು ಕೂಡಾ ಸೂಚನೆ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಲಸಿಕೆ ಪಡೆಯದವರಿಗೆ ಕೋವಿಡ್ ಬಂದರೆ ಅವರ ವೆಚ್ಚ ಭರಿಸುವುದಿಲ್ಲ:
ಆರೋಗ್ಯ ಕಾರ್ಯಕರ್ತರು ಹಾಗೂ ಫ್ರಂಟ್ ಲೈನ್ ವರ್ಕರ್ಗಳಿಗೆ ಉಚಿತವಾಗಿ ಕೋವಿಡ್ ವ್ಯಾಕ್ಸಿನ್ ನೀಡುತ್ತಿದ್ದರೂ ಕೂಡ ಕೆಲವರು ವ್ಯಾಕ್ಸಿನ್ ಪಡೆಯುತ್ತಿಲ್ಲ. ಆದ್ದರಿಂದ ಲಸಿಕೆ ಪಡೆಯದವರಿಗೆ ಕೋವಿಡ್ ಬಂದರೆ ಅವರ ವೆಚ್ಚ ಭರಿಸುವುದಿಲ್ಲ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಕೇಂದ್ರ ಸರ್ಕಾರದ ಆದೇಶದಂತೆ ಕೇರಳದಿಂದ ಬರುವವರಿಗೆ ಯಾವುದೇ ನಿರ್ಬಂಧವಿಲ್ಲ. ಕೇರಳದಿಂದ ಬರುವ ವ್ಯಕ್ತಿ/ವಿದ್ಯಾರ್ಥಿ ನಗರಕ್ಕೆ ಬಂದರೆ ಅವರು 72 ಗಂಟೆಗಳ ಒಳಗಡೆ ಮಾಡಿರುವ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ಸಂಸ್ಥೆ/ಕಾಲೇಜಿಗೆ ಸೇರಿಕೊಳ್ಳಬೇಕು. ಒಂದು ವೇಳೆ ಪರೀಕ್ಷೆ ಮಾಡಿಸಿಕೊಂಡು ಬರದಿದ್ದರೆ ಅವರು 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದು, ನಂತರ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಬಂದರೆ ಮಾತ್ರ ಹೊರಗಡೆ ಬರಲು ಅನುಮತಿ ನೀಡಬೇಕು. ಯಾರಾದರೂ ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟ ಸಂಸ್ಥೆಯ ಮುಖ್ಯಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.