ಬೆಂಗಳೂರು: ಕೊರೊನಾ ಕಂಟಕದೊಂದಿಗೆ ಲಾಕ್ಡೌನ್ನಿಂದಾಗಿ ಸಂಕಷ್ಟ ಎದುರಿಸುತ್ತಿದ್ದವರಿಗೆ, ಸರ್ಕಾರ ಆರ್ಥಿಕ ಸಹಾಯ ಮಾಡಲು ಮುಂದಾಗಿ, ಇಂತಿಷ್ಟು ವರ್ಗಕ್ಕೆ ಇಷ್ಟು ಅಂತ ಆರ್ಥಿಕ ಬಲ ತುಂಬಲು ವಿಶೇಷ ಪ್ಯಾಕೇಜ್ ಘೋಷಣೆಯನ್ನೂ ಮಾಡಿತ್ತು.
ಅದರಲ್ಲಿ, ಚಾಲಕರಿಗೆ 5,000 ಪರಿಹಾರ ನೀಡುತ್ತೇವೆ ಎಂದು ಘೋಷಣೆ ಮಾಡಿ 11 ದಿನ ಕಳೆದರೂ ಪರಿಹಾರ ಧನ ಸಿಗುವ ಯಾವುದೇ ಮುನ್ಸೂಚನೆಗಳು ಕಂಡು ಬರುತ್ತಿಲ್ಲ ಎಂದು ಆಟೋ ಮತ್ತು ಟ್ಯಾಕ್ಸಿ ಚಾಲಕ ಸಂಘಟನೆಗಳು ಆಕ್ರೋಶ ಹೊರಹಾಕಿ, ಇಂದು ಶಾಂತಿನಗರದಲ್ಲಿರುವ ಸಾರಿಗೆ ಆಯುಕ್ತರ ಕಚೇರಿ ಮುಂಭಾಗ ಸರ್ಕಾರ ಸುಳ್ಳು ಘೋಷಣೆ ಮಾಡಿದೆ ಎಂದು 11ನೇ ದಿನದ ತಿಥಿ ಕಾರ್ಯಮಾಡಿ ಎಳ್ಳುನೀರು ಬಿಟ್ಟಿದ್ದಾರೆ.
ದಿನೇ ದಿನೆ ಹೊಸ ಹೊಸ ಮಾನದಂಡಗಳು ನಿಬಂಧನೆಗಳು ಚಾಲಕರ ಮೇಲೆ ಹೇರುತ್ತಲೇ ಬರುತ್ತಿದ್ದಾರೆ. ಹಾಗೆಯೇ 7 ಲಕ್ಷದ 75 ಸಾವಿರ ಚಾಲಕರಿಗೆ ತಲಾ 5 ಸಾವಿರ ರೂಪಾಯಿ ನೀಡುತ್ತೇವೆ ಎಂದು ಹೇಳಿ ಈಗ ಕೇವಲ 20 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಇದರಿಂದ ಪ್ರತಿ ಚಾಲಕನಿಗೆ ಕೇವಲ 40 ರೂಪಾಯಿಗಳು ಮಾತ್ರ ಬರುತ್ತದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಚಾಲಕರಿಗೆ ಈ ಹಣ ಸೇರಲೇ ಬಾರದೆಂದು ಸರ್ಕಾರ ಕುತಂತ್ರ ನಡೆಸುತ್ತಿದೆ. ಇದನ್ನು ಖಂಡಿಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಕಿಡಿಕಾರಿದರು.