ದೇವನಹಳ್ಳಿ(ಬೆಂ.ಗ್ರಾ): ಕೊರೊನಾ ಭೀತಿಯಿಂದ ನಾಗರಿಕ ವಿಮಾನಯಾನ ಇಲಾಖೆಯು, ವಿಮಾನಗಳ ಸಂಚಾರವನ್ನು ನಿಲ್ಲಿಸಿತ್ತು. ಎರಡು ತಿಂಗಳ ನಂತರ ಮೇ 25 ರಿಂದ ಮತ್ತೆ ಪ್ರಾರಂಭವಾದ ಸ್ವದೇಶಿ ವಿಮಾನಗಳ ಸಂಚಾರಕ್ಕೆ, ಸೆಪ್ಟೆಂಬರ್ 1ಕ್ಕೆ ನೂರು ದಿನ ಪೂರೈಸಿದೆ.
ನೂರು ದಿನಗಳ ಅವಧಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 15,658 ವಿಮಾನಗಳು ಹಾರಾಟ ನಡೆದಿದ್ದು, ಒಟ್ಟು 1.4 ದಶಲಕ್ಷ ಸ್ವದೇಶಿ ಪ್ರಯಾಣಿಕರು ವಿಮಾನಯಾನ ಸೇವೆ ಪಡೆದಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶದ 58 ನಗರಗಳ ಪೈಕಿ, 49 ನಗರಗಳೊಂದಿಗೆ ಮತ್ತೆ ವಿಮಾನಯಾನ ಪುನರಾರಂಭವಾಗಿದೆ. ಅತಿ ಹೆಚ್ಚಿನ ಪ್ರಯಾಣಿಕರು ಕೊಲ್ಕತ್ತಾ ನಗರಕ್ಕೆ ಪ್ರಯಾಣಿಸಿದ್ದಾರೆ.
![Kempegowda International Airport](https://etvbharatimages.akamaized.net/etvbharat/prod-images/8654764_thumb.png)
ಮೇ ತಿಂಗಳ ಅವಧಿಯಲ್ಲಿ ಒಟ್ಟು 863 ವಿಮಾನಗಳು ಹಾರಾಟ ನಡೆಸಿದ್ದು, ಈ ಅವಧಿಯಲ್ಲಿ ಒಟ್ಟು 65,418 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಜೂನ್ ತಿಂಗಳಲ್ಲಿ ಒಟ್ಟು 4,004 ವಿಮಾನಗಳ ಹಾರಾಟವಾಗಿದ್ದು, 3,69,873 ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಜುಲೈ ತಿಂಗಳಲ್ಲಿ ಒಟ್ಟು 4,576 ವಿಮಾನಗಳು ಹಾರಾಟ ನಡೆಸಿದ್ದು, ಒಟ್ಟು 4,18,384 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇನ್ನು ಆಗಸ್ಟ್ ತಿಂಗಳಲ್ಲಿ 6,215 ವಿಮಾನಗಳ ಹಾರಾಟ ನಡೆದಿದ್ದು, ಈ ಅವಧಿಯಲ್ಲಿ ಒಟ್ಟು 6,27,374 ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಆಗಸ್ಟ್ 30 ರಂದು 29,950 ಪ್ರಯಾಣಿಕರು ಪ್ರಯಾಣಿಸಿದ್ದು, ಇದು ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ ದಿನವಾಗಿದೆ. ಆಗಸ್ಟ್ 28 ರಂದು 305 ವಿಮಾನಗಳ ಹಾರಾಟ ನಡೆದಿದ್ದು, ಇದರಲ್ಲಿ ಇದು ದಿನದ ಅತಿ ಹೆಚ್ಚು ವಿಮಾನಗಳ ಹಾರಾಟವಾಗಿದೆ.