ಆನೇಕಲ್: ಜೊಮ್ಯಾಟೋ ಕಂಪನಿ ವಿರುದ್ಧ ಡೆಲವರಿ ಹುಡುಗರಾಗಿ ದುಡಿಯುವ ಯುವಕರೇ ತಿರುಗಿ ಬಿದ್ದಿದ್ದಾರೆ. ಸರಿಯಾದ ರೀತಿಯ ವೇತನ ನೀಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿದಿನ ಹಗಲು ರಾತ್ರಿ ಎನ್ನದೇ ಆಹಾರ ಸರಬರಾಜು ಮಾಡುವ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಗೆ ಬರುವ ಎಲ್ಲಾ ಜೊಮ್ಯಾಟೋ ಡೆಲವರಿ ಬಾಯ್ಸ್ ಒಂದಾಗಿ ಪ್ರತಿಭಟನೆ ನಡೆಸಿದ್ದಾರೆ. ಕಂಪನಿಯಲ್ಲಿ ಆಗ ನೀಡುತ್ತಿದ್ದ ವೇತನ ಮತ್ತು ಕಮಿಷನ್ ಹಾಗೂ ಇನ್ಸೆಂಟೀವ್ಗಳನ್ನು ಬಹುತೇಕ ಕಡಿತಗೊಳಿಸಿದೆ. ಒಂದು ಡೆಲಿವರಿಗೆ ಇಂತಿಷ್ಟು ಎಂದು ನಿಗದಿಯಾಗಿದ್ದ ಹಣಕ್ಕೆ ಕಂಪನಿ ಕಮಿಷನ್ನಲ್ಲಿ ಅರ್ಧಕ್ಕಿಂಕ ಕಡಿಮೆ ಹಣವನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆ ಸೇರಿದಂತೆ ಅನೇಕ ರಾಜ್ಯಗಳಿಂದ ಇಲ್ಲಿಗೆ ಇದೇ ಕೆಲಸ ಅರಸಿ ಬಂದಿರುವ ಯುವಕರು ಇದೀಗ ಕಂಪನಿಯ ನಿರ್ಧಾರಕ್ಕೆ ಆಕ್ರೋಶಗೊಂಡಿದ್ದಾರೆ. ಎಲ್ಲಾ ಯುವಕರು ಒಗಟ್ಟಾಗಿ ಎಲೆಕ್ಟ್ರಾನಿಕ್ ಸಿಟಿಯ 1ನೇ ಹಂತದಲ್ಲಿನ ಖಾಸಗಿ ರೆಸ್ಟೋರೆಂಟ್ ಬಳಿ ಜೊಮ್ಯಾಟೋ ಕಂಪನಿಯ ವಿರುದ್ಧ ಘೋಷಣೆ ಕೂಗುತ್ತ ತಮ್ಮ ಆಕ್ರೋಶ ಹೊರಹಾಕಿದರು.