ಆನೇಕಲ್: ನಾಳೆ ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ ಇಂದು ಬನ್ನೇರುಘಟ್ಟ ಉದ್ಯಾನವನದ ಹುಲಿ ಸಫಾರಿಯಲ್ಲಿ ಹುಲಿ ಮರಿಗಳ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು.
ನಾಳೆ ಹುಲಿ ದಿನವಾಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿಯ ಪಿಸಿಸಿಎಫ್ ಆಗಿರುವ ರವೀಂದ್ರ ನೇತೃತ್ವದಲ್ಲಿ ಹುಲಿ ಮರಿಗಳನ್ನು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬಿದ್ದಿದ್ದು, ಹಸಿರು ಮರಗಿಡಗಳ ನಡುವೆ ಆಟವಾಡುತ್ತಿದ್ದ ಹುಲಿಗಳನ್ನು ಕಂಡು ಸಂತಸಗೊಂಡರು.
ಸಫಾರಿಯಲ್ಲಿರುವ ಅಮರ್ ಮತ್ತು ವಿಸ್ಮಯ ಎಂಬ ಹುಲಿಗಳ ಮರಿಗಳನ್ನು ಇದೇ ಮೊದಲ ಬಾರಿಗೆ ಪ್ರವಾಸಿಗರ ವೀಕ್ಷಣೆಗಾಗಿ ಅವಕಾಶ ಮಾಡಿಕೊಡಲಾಗಿತ್ತು. ಇಷ್ಟು ದಿನ ಹುಲಿ ಮರಿಗಳನ್ನ ಸಫಾರಿಯಲ್ಲಿಯೇ ಪ್ರತ್ಯೇಕವಾಗಿ ಪೋಷಣೆ ಮಾಡುತ್ತಿದ್ದರು. ಇದರಲ್ಲಿ ಒಂದು ಬಿಳಿ ಹುಲಿ ಮರಿಯಿದ್ದು ನೋಡಗರ ಗಮನ ಸೆಳೆಯುತ್ತಿತ್ತು.
ಭಾರತದಲ್ಲಿ ಕರ್ನಾಟಕ ಟೈಗರ್ ರಾಜ್ಯ ಎಂಬ ಹೆಸರನ್ನು ಪಡೆದಿದೆ. ನಮ್ಮ ಬನ್ನೇರುಘಟ್ಟ ಉದ್ಯಾನವನ ಕೇವಲ ಬೆಂಗಳೂರಿಗೆ ಮಾತ್ರವಲ್ಲದೇ ಇಡೀ ಕರ್ನಾಟಕಕ್ಕೆ ಮುಕುಟವಾಗಿದೆ. ನಾಳೆ ಅಂತಾರಾಷ್ಟೀಯ ಹುಲಿ ದಿನವಾಗಿದ್ದು, ನಮ್ಮ ಉದ್ಯಾನವನಲದಲ್ಲಿ ವಿಶೇಷವಾಗಿ ಆಚರಣೆ ಮಾಡುತ್ತಿದ್ದೇವೆ. ಇಂದು ಏಳು ಹುಲಿ ಮರಿಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಅನುವು ಮಾಡಿ ಕೊಟ್ಟಿದ್ದೇವೆ. ಈ ಮೂಲಕ ಜನರಲ್ಲಿ ಹುಲಿಗಳ ಕುರಿತು ಹೆಚ್ಚಿನ ಆಸಕ್ತಿ ಬೆಳೆಯಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಡಿ ತಿಳಿಸಿದರು.