ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಅಂದಾಜು 5 ಸಾವಿರಕ್ಕೂ ಹೆಚ್ಚು ಮೃತದೇಹಗಳ ಅಂತಿಮ ಸಂಸ್ಕಾರ ಮಾಡುವ ಮೂಲಕ ಇಲ್ಲೊಬ್ಬ ಮಹಿಳೆ ಗಮನ ಸೆಳೆದಿದ್ದಾರೆ. ಈ ಮೊದಲು ಪತಿ, ಪತ್ನಿ ಒಟ್ಟಾಗಿ ಶವಸಂಸ್ಕಾರ ಮಾಡುವ ಕಾಯಕ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಪತಿಯ ನಿಧನಾ ನಂತರ ಸ್ಮಶಾನದಲ್ಲೇ ವಾಸವಿದ್ದು ಶವ ಸುಡುವ ಕಾರ್ಯವನ್ನು ಮಹಿಳೆ ಮುಂದುವರಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದಿಂದ ಸುಮಾರು ಮೂರು ಕಿ.ಮೀ ದೂರದಲ್ಲಿರುವ ಮುಕ್ತಿಧಾಮ ಸತ್ತವರಿಗೆ ಸದ್ಗತಿ ಕೂಡುವ ತಾಣ. ಇಲ್ಲಿಗೆ ಬಂದಾಗ ಮೊದಲು ಗಮನ ಸೆಳೆಯುವುದು ಹೆಣ ಸುಡುವುದನ್ನೇ ಕಾಯಕ ಮಾಡಿಕೊಂಡಿರುವ ಸುಮಾರು 60 ವರ್ಷದ ಲಕ್ಷ್ಮಮ್ಮ. ಈ ಕಾಲಘಟ್ಟದಲ್ಲಿಯೂ ಸ್ಮಶಾನಕ್ಕೆ ಹೋಗುವುದಕ್ಕೂ ಹೆದರುವ ಜನರಿರುವ ಸಮಾಜದಲ್ಲಿ ಈಕೆ ಇಲ್ಲಿಯವರೆಗೂ ಐದು ಸಾವಿರಕ್ಕೂ ಹೆಚ್ಚು ಶವಗಳಿಗೆ ಮುಕ್ತಿ ಕೊಟ್ಟಿದ್ದಾರೆ.
ನಗರದ ದೇವಾಂಗ ಮಂಡಳಿಯ ಪರಿಶ್ರಮದಿಂದ 2001ರಲ್ಲಿ ಮುಕ್ತಿಧಾಮ ಪ್ರಾರಂಭವಾಗಿದೆ. ಅಂದಿನಿಂದಲೇ ಪತಿ ಉಮಾಶಂಕರ್ ಅವರೊಂದಿಗೆ ಹೆಣ ಸುಡುವ ಕೆಲಸ ಆರಂಭಿಸಿದ್ದರು ಲಕ್ಷ್ಮಮ್ಮ. ಏಳು ವರ್ಷಗಳ ಹಿಂದೆ ಪತಿ ನಿಧನರಾಗಿದ್ದು ನಂತರ ಲಕ್ಷ್ಮಮ್ಮ ಇದೇ ಕಾಯಕವನ್ನು ಒಬ್ಬಂಟಿಯಾಗಿಯೇ ನಡೆಸುತ್ತಿದ್ದಾರೆ. ಮುಕ್ತಿಧಾಮದಲ್ಲಿ ಪ್ರತಿದಿನ ಒಂದೆರಡು ಶವಗಳಿಗೆ ಸಂಸ್ಕಾರವನ್ನು ಇವರು ಮಾಡುತ್ತಿದ್ದಾರೆ. ಇಲ್ಲಿಗೆ ಶವ ಬರುವುದಕ್ಕೂ ಮುನ್ನ ಸಿಲಿಕಾನ್ ಪೆಟ್ಟಿಗೆಯಲ್ಲಿ ಸೌದೆಗಳನ್ನು ಜೋಡಿಸಲಾಗುತ್ತದೆ. ನಂತರ ಸೌದೆಯ ಮೇಲೆ ಹೆಣವಿಟ್ಟು, ಮತ್ತೆ ಸೌದೆಗಳನ್ನು ಜೋಡಿಸುತ್ತಾರೆ. ಒಂದು ಹೆಣ ಸಂಪೂರ್ಣವಾಗಿ ಸುಟ್ಟು ಬೂದಿಯಾಗಲು ಸುಮಾರು 5 ರಿಂದ 6 ತಾಸು ತಗಲುತ್ತದೆ. ಹೆಣ ಸಂಪೂರ್ಣವಾಗಿ ಬೂದಿಯಾಗುವವರೆಗೂ ಲಕ್ಷ್ಮಮ್ಮ ಕಾಯುತ್ತಾರೆ. ದೇವಾಂಗ ಮಂಡಳಿಯಿಂದ ಕೊಡುವ 6 ಸಾವಿರ ರೂಪಾಯಿ ಮತ್ತು ಮೃತರ ಕಡೆಯಿಂದ ಸಿಗುವ ಹಣದಿಂದ ಇವರು ಬದುಕು ಸಾಗಿಸುತ್ತಿದ್ದಾರೆ.
ಈಟಿವಿ ಭಾರತ್‌ಗೆ ಲಕ್ಷ್ಮಮ್ಮ ಪ್ರತಿಕ್ರಿಯಿಸಿ, "ಕೋವಿಡ್ ಸಮಯದಲ್ಲಿ ಸತ್ತವರ ಶವಸಂಸ್ಕಾರ ಮಾಡುವುದೇ ದೊಡ್ಡ ಸವಾಲಾಗಿತ್ತು. ಹತ್ತಿರದ ಸಂಬಂಧಿಕರೇ ಹೆಣಗಳನ್ನು ಮುಟ್ಟುವುದಕ್ಕೂ ಹೆದರುತ್ತಿದ್ದರು. ಇಂತಹ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಯಾವುದೇ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಮಾಸ್ಕ್ ಧರಿಸಿ, ದಿನಕ್ಕೆ 7 ರಿಂದ 10 ಶವಗಳ ಸಂಸ್ಕಾರ ಮಾಡುತ್ತಿದ್ದೆ. ಹೀಗೆ ದಿನನಿತ್ಯ ಜೀವನ ನಡೆಯುತ್ತಿದೆ. ಇಲ್ಲಿ ನನಗೆ ಯಾವುದೇ ಭಯವೂ ಇಲ್ಲ. ನೆಮ್ಮದಿಯಿಂದ ಇದ್ದೇನೆ" ಎಂದು ಅವರು ಹೇಳುತ್ತಾರೆ.
ಕೆಲವೊಮ್ಮೆ ಶವಗಳಿಗೆ ಇವರೇ ಶಾಸ್ತ್ರೋಕ್ತವಾಗಿ ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ ಮಾಡಿರುವುದೂ ಉಂಟು. ಈ ಮಾತನ್ನು ಅವರೇ ಹೇಳಿದ್ದಾರೆ. ಲಕ್ಷ್ಮಮ್ಮನವರ ಸೇವೆ ಮೆಚ್ಚಿ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸೇರಿದಂತೆ ಇನ್ನಿತರೆ ಸಂಘ, ಸಂಸ್ಥೆಗಳು ಅಪರೂಪದ ಸೇವೆ ಗುರುತಿಸಿ ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿವೆ.
ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಅಶಾಂತಿ ವಾತಾವರಣ: ಕರಗ ಮಹೋತ್ಸವ ರದ್ದು ಮಾಡಿದ ಗ್ರಾಮಸ್ಥರು