ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) : ಪಾನಮತ್ತ ಚಾಲಕನಿಂದಾಗಿ ಬಿಬಿಎಂಪಿ ಲಾರಿಗೆ ಸಿಲುಕಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಹುಲುಕುಂಟೆ ಗ್ರಾಮದಲ್ಲಿ ನಡೆದಿದೆ. ಅಪಘಾತ ನಡೆದು 5 ತಾಸು ಕಳೆದರೂ ಸ್ಥಳೀಯರು ಶವವನ್ನು ರಸ್ತೆಯಲ್ಲಿಯೇ ಇಟ್ಟು ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಮೃತರನ್ನು ನೆಲಮಂಗಲ ತಾಲೂಕಿನ ಮರಳುಕುಂಟೆ ನಿವಾಸಿಗಳಾದ ಮಾರುತಿ(28) ಮತ್ತು ಮಹೇಶ್ (30) ಎಂದು ಗುರುತಿಸಲಾಗಿದೆ. ಸ್ನೇಹಿತರಾದ ಇವರು ಮಧುರೆ ಶನಿಮಹಾತ್ಮ ದೇವಸ್ಥಾನಕ್ಕೆ ಹೋಗಿ ಗ್ರಾಮಕ್ಕೆ ವಾಪಸಾಗುವಾಗ ಅಪಘಾತ ಸಂಭವಿಸಿದೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಬಂಧಿಸಿದ್ದಾರೆ.
ಬಿಬಿಎಂಪಿ ಕಸದ ಲಾರಿಗೆ ಸಿಲುಕಿ ಐದು ತಿಂಗಳಲ್ಲಿ ಏಳು ಸಾವು : ಕಳೆದ ಐದು ತಿಂಗಳಲ್ಲಿ ಬಿಬಿಎಂಪಿ ಕಸದ ಲಾರಿಗೆ ಸಿಲುಕಿ 7 ಜನರು ಸಾವನ್ನಪ್ಪಿದ್ದಾರೆ. ಪದೇ ಪದೇ ಬಿಬಿಎಂಪಿ ಲಾರಿಗಳ ಅಪಘಾತಕ್ಕೆ ಸಿಲುಕಿ ಸ್ಥಳೀಯ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಮತ್ತು ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ ಅವರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಅಪಘಾತ ನಡೆದು ಸುಮಾರು ಐದು ತಾಸು ಕಳೆದರೂ, ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಮತ್ತು ಸಚಿವರು ಬಂದಿಲ್ಲವೆಂದು ಸ್ಥಳೀಯರು ಕಿಡಿಕಾರಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಸ್ಥಳಕ್ಕೆ ದೊಡ್ಡ ಬೆಳವಂಗಲ ಪೊಲೀಸರು ದೌಡಾಯಿಸಿದ್ದಾರೆ.
ಇದನ್ನೂ ಓದಿ : ಬಿಬಿಎಂಪಿ ಕಸದ ಲಾರಿಗೆ ಯುವಕ ಬಲಿ.. ಮೃತನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ