ನೆಲಮಂಗಲ(ಬೆಂ.ಗ್ರಾ): ನಗರದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿದಿನ ಸರಾಸರಿ 700ರಿಂದ 900 ಪ್ರಕರಣಗಳು ಪತ್ತೆಯಾಗುತ್ತಿವೆ. ಈ ತಿಂಗಳ ಅಂತ್ಯಕ್ಕೆ ಬೆಂಗಳೂರು ನಗರದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಪ್ರಕರಣಗಳನ್ನು ನಿರ್ವಹಿಸಲು ಈಗಾಗಲೇ ಸರ್ಕಾರ ಬೇಕಾದ ಅಗತ್ಯ ಸಿದ್ಧತೆಯಲ್ಲಿ ತೊಡಗಿದೆ. ಇಲ್ಲಿನ ತುಮಕೂರು ರಸ್ತೆಯ ಮಾದವಾರ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ 7 ಸಾವಿರ ಬೆಡ್ಗಳ ಆಸ್ಪತ್ರೆ ನಿರ್ಮಾಣ ಕಾರ್ಯ ಶರವೇಗದಲ್ಲಿ ನಡೆಯುತ್ತಿದೆ.
ರೋಗ ಲಕ್ಷಣ ಇಲ್ಲದ ಸೋಂಕಿತರಿಗೆ ಚಿಕಿತ್ಸೆ ನೀಡಲು ಈ ಆಸ್ಪತ್ರೆ ಮೀಸಲಿಡಲಾಗುತ್ತಿದೆ. ಕರ್ನಾಟಕದಲ್ಲೇ ಅತಿ ದೊಡ್ಡ ಕೋವಿಡ್ ಆರೋಗ್ಯ ಕೇಂದ್ರ ಇದಾಗಿದ್ದು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಬಿಐಇಸಿ ಅವರಣದಲ್ಲಿ ದೊಡ್ಡದಾದ ಐದು ಹಾಲ್ಗಳಿದ್ದು, ಪ್ರತಿಯೊಂದು ಹಾಲ್ ಒಂದೂವರೆ ಸಾವಿರ ಬೆಡ್ಗಳ ಸಾಮಾರ್ಥ್ಯ ಹೊಂದಿವೆ. ಇದರಿಂದ ಒಟ್ಟು 7 ಸಾವಿರ ಬೆಡ್ಗಳು ಲಭ್ಯವಾಗಲಿವೆ.
ಪ್ರತಿಯೊಂದು ಬೆಡ್ಗೆ ಅಗತ್ಯವಾಗಿ ಬೇಕಾಗುವ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಲ್ಲದೆ ಒಂದು ಬೆಡ್ನಿಂದ ಮತ್ತೊಂದು ಬೆಡ್ಗೆ 6 ಅಡಿಗಳ ಅಂತರ ಇರಲಿದೆ. ಇದರಿಂದ ಗುಣಮುಖರಾದ ರೋಗಿಯು ಪಕ್ಕದ ರೋಗಿಯ ಸಂಪರ್ಕಕ್ಕೆ ಬರಲು ಸಾಧ್ಯವಿಲ್ಲ.
ಪ್ರತಿಯೊಂದು ಹಾಲ್ನಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ 40 ಶೌಚ ಗೃಹ ನಿರ್ಮಾಣ ಮಾಡಲಾಗಿದೆ. ಶವರ್ ಸಹಿತ ತಾತ್ಕಾಲಿಕ ಸ್ನಾನ ಗೃಹಗಳನ್ನು ಸಹ ನಿರ್ಮಾಣ ಮಾಡಲಾಗಿದೆ. ಹಾಲ್ಗಳಲ್ಲಿ ಈಗಾಗಲೇ ವೆಂಟಿಲೇಷನ್ ಮತ್ತು ಆಗ್ನಿಶಾಮಕ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಒಂದು ಅಗ್ನಿಶಾಮಕ ವಾಹನವನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.