ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಜಿಮ್ ಟ್ರೈನರ್ನಿಂದಾಗಿ ಮೂವರು ಯುವತಿಯರ ಬಾಳು ಹಾಳಾಗಿದೆ ಎಂದು ಆರೋಪಿಸಿ ಜನ ರೊಚ್ಚಿಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಮ್ ಟ್ರೈನರ್ ವಿರುದ್ಧ ತನಿಖೆಗೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ದೊಡ್ಡಬಳ್ಳಾಪುರದಲ್ಲಿ ಯಾವುದೇ ಮಾನದಂಡಗಳಿಲ್ಲದೆ, ಮಹಿಳೆಯರಿಗೆ ಸುರಕ್ಷತೆ ನೀಡದೆ ಜಿಮ್ ತರಬೇತಿ ಕೇಂದ್ರದಲ್ಲಿ ನಡೆದ ಘಟನೆಯಿಂದ ಒಬ್ಬ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ. ಇಷ್ಟೇ ಅಲ್ಲದೆ ಮತ್ತೊಬ್ಬ ಯುವತಿ ಗರ್ಭಿಣಿಯಾಗಿ, ಇನ್ನೊಬ್ಬ ಯುವತಿಯ ಬಾಳು ಹಾಳಾಗಿದೆ ಎನ್ನುವ ಆರೋಪವಿದೆ.
ಈ ವಿಚಾರವಾಗಿ ಜಿಮ್ ಟ್ರೈನರ್ ಮಾದಕ ವಸ್ತುಗಳಿಂದ ಯುವತಿಯರಿಗೆ ಮೋಸ ಮಾಡಿದ್ದಾನೆ. ಈ ಮೂರು ಯುವತಿಯರ ಪ್ರಕರಣಗಳಲ್ಲದೇ ಮತ್ತಷ್ಟು ಪ್ರಕರಣಗಳು ಹೊರ ಬರುತ್ತಿವೆ ಎಂದು ಕಾರ್ನಾಟಕ ರಕ್ಷಣಾ ವೇದಿಕೆ, ಪ್ರವೀಣ್ ಶೆಟ್ಟಿ ಬಳಗದ ಪ್ರಧಾನ ಕಾರ್ಯದರ್ಶಿ ರಾಜ್ ಘಟ್ಟ ರವಿ ಆರೋಪಿಸಿದ್ದಾರೆ.
ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ಬಳಿಕ ದೇವನಹಳ್ಳಿ ದೇಶದ ಕೇಂದ್ರ ಬಿಂದುವಾಗಿದೆ. ವೇಗವಾಗಿ ಬೆಳವಣಿಗೆಯಾಗುತ್ತಿರುವುದನ್ನೇ ಬಳಸಿಕೊಂಡ ಕೆಲವರು ಜಿಮ್ ತರಬೇತಿ, ಬ್ಯೂಟಿ ಪಾರ್ಲರ್, ಕರಾಟೆ, ಡ್ಯಾನ್ಸ್, ಮಹಿಳಾ ಪಿಜಿಗಳು ಸೇರಿದಂತೆ ಹಲವಾರು ಕೇಂದ್ರಗಳನ್ನು ಆರಂಭಿಸಿದ್ದಾರೆ. ಇದರಲ್ಲಿ ಕೆಲವರು ಎಲ್ಲಾ ನೀತಿ ನಿಯಮಗಳನ್ನು ಅನುಸರಿಸಿದ್ರೆ, ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದರು.
ಹೀಗಾಗಿ ಎಲ್ಲಾ ಕೇಂದ್ರದ ಮಾಲೀಕರನ್ನು ಕರೆಸಿ, ಅವರನ್ನು ಪರೀಕ್ಷಿಸಿ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಹೊಸ ಕಾನೂನು ರೂಪಿಸಬೇಕು. ಹಾಗೂ ಕೆಲವೊಂದು ನಿಯಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಅಲ್ಲದೇ ಕಾನೂನು ಬಾಹಿರವಾಗಿ ಹಾಗೂ ಅನಧಿಕೃತವಾಗಿ ನಡೆಸುತ್ತಿರುವ ಕೆಲವೊಂದು ಇಂತಹ ತರಬೇತಿ ಕೇಂದ್ರಗಳನ್ನು ಮುಚ್ಚಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು.
ದೊಡ್ಡಬಳ್ಳಾಪುರದಲ್ಲಿ ಜಿಮ್ ಟ್ರೈನರ್ ಹಲವು ಮಹಿಳೆಯರಿಗೆ ಮೋಸ ಮಾಡಿದ್ದು, ಇನ್ನಷ್ಟು ಪ್ರಕರಣಗಳು ಆತನ ಮೇಲಿವೆ. ಪೊಲೀಸರು ಉತ್ತಮ ರೀತಿಯಲ್ಲಿ ತನಿಖೆ ಕೈಗೊಂಡರೆ ಮತ್ತಷ್ಟು ಪ್ರಕರಣಗಳು ಹೊರ ಬರಲಿವೆ ಎಂದು ಹೇಳಿದರು.