ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಸ್ಸೋಂ ರಾಜಧಾನಿ ಗುವಾಹಟಿಗೆ ಪ್ರಯಾಣ ಬೆಳೆಸುವ ವೇಳೆ ಕಾಲಿನಲ್ಲಿ ಚಾಕು, ಬ್ಲೇಡ್ ಮತ್ತು ನೈಲ್ ಕಟರ್ ಕಟ್ಟಿಕೊಂಡು ಬಂದಿದ್ದ ಗರ್ಭಿಣಿಯನ್ನು ಕೆಐಎಎಲ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಏಪ್ರಿಲ್ 8ರ ಬೆಳಗ್ಗೆ 5:20ಕ್ಕೆ ಇಂಡಿಗೋ ವಿಮಾನದಲ್ಲಿ ಬೆಂಗಳೂರಿನಿಂದ ಗೌಹಾಟಿಗೆ ಗರ್ಭಿಣಿ ಉಮಾದೇವಿ ಕುಟುಂಬದ ನಾಲ್ವರು ಸದಸ್ಯರೊಂದಿಗೆ ಪ್ರಯಾಣ ಬೆಳೆಸಿದ್ದಳು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಪ್ರಯಾಣಿಕರನ್ನ ತಪಾಸಣೆ ಮಾಡುವ ಸಮಯದಲ್ಲಿ ಉಮಾದೇವಿ ನಡೆ ಅನುಮಾನಾಸ್ಪದವಾಗಿತ್ತು. ಅವರನ್ನು CISF ಸಿಬ್ಬಂದಿ ತಪಾಸಣೆ ನಡೆಸಿದಾಗ ಕಾಲಿನಲ್ಲಿ ಚೂಪಾದ ಚಾಕು, ಬ್ಲೇಡ್, ನೈಲ್ ಕಟರ್ ಮತ್ತು ಒಂದು ಪೇಪರ್ ಕಟರ್ ಕಟ್ಟಿಕೊಂಡಿರುವುದು ಗಮನಕ್ಕೆ ಬಂದಿದೆ. ಕೂಡಲೇ ಆಕೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರ ವಶಕ್ಕೆ ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಗರ್ಭಿಣಿ ಉಮಾದೇವಿಯನ್ನ ವಿಚಾರಣೆ ನಡೆಸಿದಾಗ, ವೈದಕೀಯ ತಪಾಸಣೆಗೆಂದು ಆಕೆ ಕುಟುಂಬದೊಂದಿಗೆ ಬೆಂಗಳೂರಿಗೆ ಆಗಮಿಸಿದ್ದು ನಂತರ ಗೌಹಾಟಿಗೆ ಪ್ರಯಾಣ ಬೆಳೆಸಿದ್ದಳು. ಅವರ ಸಮುದಾಯದ ಸಂಪ್ರದಾಯದಂತೆ ಗರ್ಭಿಣಿಯರು ಲೋಹದ ವಸ್ತುಗಳನ್ನ ಹೊಟ್ಟೆಯ ಸುತ್ತ ಕಟ್ಟಿಕೊಳ್ಳುತ್ತಾರಂತೆ. ಆದರೆ ಹೊಟ್ಟೆಯ ಭಾಗಕ್ಕೆ ಕಟ್ಟಿಕೊಳ್ಳುವುದು ಕಿರಿಕಿರಿ ಅನಿಸಿದ್ದಕ್ಕೆ ಕಾಲಿಗೆ ಕಟ್ಟಿಕೊಂಡಿದ್ದರಂತೆ.
ತಕ್ಷಣವೇ ಎಚ್ಚೆತ್ತ CISF ಸಿಬ್ಬಂದಿ ಉಮಾದೇವಿ ಕುಟುಂಬದ ಲಗೇಜ್ಗಳನ್ನ ವಿಮಾನದಿಂದ ಇಳಿಸಿ ತಪಾಸಣೆ ನಡೆಸಿದ್ದಾರೆ. ಆಕೆ ತನ್ನ ಸೀಟ್ ಅನ್ನು ವಿಮಾನದ ಕಾಕ್ಪಿಟ್ ಬಳಿಯೇ ಬುಕ್ ಮಾಡಿದ್ದು ಸಹ ಅನುಮಾನಕ್ಕೆ ಕಾರಣವಾಗಿದೆ. ಗರ್ಭಿಣಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.