ಬೆಂಗಳೂರು: ಹೊಸಕೋಟೆ ಉಪ ಸಮರದಲ್ಲಿ ಸೋತು ಮೌನಕ್ಕೆ ಜಾರಿದ್ದ ಎಂಟಿಬಿ ನಾಗರಾಜ್, ಎಂಎಲ್ಸಿ ಆಗುತ್ತಿದ್ದಂತೆ ಮೈಕೊಡವಿಕೊಂಡು ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಸಮರ ಸಾರಿದ್ದಾರೆ. ಕ್ಷೇತ್ರದಲ್ಲಿ ಪಾದರಸದಂತೆ ಓಡಾಡುತ್ತಿರುವ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ವಾಗ್ಬಾಣಗಳನ್ನು ಬಿಡುತ್ತಿರುವ ಎಂಟಿಬಿ, ಇದೀಗ ಭೂ ಅಸ್ತ್ರ ಪ್ರಯೋಗಿಸಿದ್ದಾರೆ.
ಎರಡು ದಿನಗಳ ಹಿಂದೆ ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಎಂಟಿಬಿ ನಾಗರಾಜ್ ಚಾಲನೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಶರತ್ ಬಚ್ಚೇಗೌಡ, ಕಳೆದ 9 ತಿಂಗಳ ಕಾಲ ಗಡಾರಿ(ಹಾರಿಕೋಲ)ನ್ನು ಕಾರಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದರು. ಅದು ತುಕ್ಕು ಹಿಡಿದಿರಬೇಕು. ತುಕ್ಕು ಹೋಗಲಾಡಿಸಲು ಯಾರನ್ನೂ ಕರೆಯದೆ ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದರು
ಇದಕ್ಕೆ ತಿರುಗೇಟು ನೀಡಿರುವ ಎಂಟಿಬಿ ನಾಗರಾಜ್ ಅವರು, ಶಾಸಕ ಶರತ್ ಬಚ್ಚೇಗೌಡ ಕುಟುಂಬಸ್ಥರು ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಶಾಂತನಪುರದಲ್ಲಿ ಸರ್ಕಾರಿ ಜಾಗ ಮತ್ತು ಸ್ಮಶಾನ ಜಾಗವನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಈ ಬಗ್ಗೆ ದಾಖಲೆ ಸಮೇತ ಮಾಧ್ಯಮಗಳ ಮುಂದೆ ಬರುತ್ತೇನೆ. ಅವರಿಗೆ ತಾಕತ್ತು ಇದ್ದರೆ ನನ್ನ ಮುಂದೆ ಬರಲಿ. ನೈತಿಕತೆಯಿದ್ದರೆ ರಾಜೀನಾಮೆ ನೀಡಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದಲ್ಲಿ ಶಾಸಕನಾಗಿ ಕೇವಲ ಏಳೆಂಟು ತಿಂಗಳುಗಳು ಕಳೆದಿವೆ ಅಷ್ಟೇ. ನಾನು 40 ವರ್ಷಗಳ ರಾಜಕಾರಣದಲ್ಲಿ ನಾಲ್ಕು ಬಾರಿ ಶಾಸಕನಾಗಿ ಒಂದು ಬಾರಿ ಸಚಿವನಾಗಿದ್ದೇನೆ. ಬಚ್ಚೇಗೌಡ ಕುಟುಂಬದವರಿಗಿಂತ ನಾನು 10 ಪಟ್ಟು ಶ್ರೀಮಂತ. ನನಗೆ ರಾಜಕೀಯದಲ್ಲಿ ಹಣ ಮಾಡುವ ಆಸೆ ಇಲ್ಲ. ಸುಳ್ಳು, ಮೋಸದ ರಾಜಕಾರಣ ಮಾಡಿಕೊಂಡು ಜೆಡಿಎಸ್, ಬಿಜೆಪಿ, ಪಕ್ಷೇತರ ಆಗಿ ಇದೀಗ ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ. ಇವರು ಸ್ವಾರ್ಥಿಗಳಾ ಅಥವಾ ನಿಸ್ವಾರ್ಥಿಗಳ ಎಂಬುದನ್ನು ಜನರೇ ತೀರ್ಮಾನ ಮಾಡುತ್ತಾರೆ ಎಂದು ಎಂಟಿಬಿ ಗುಡುಗಿದ್ದಾರೆ.