ದೊಡ್ಡಬಳ್ಳಾಪುರ : ತಾಲೂಕಿನ ಬಡ ಕುಟುಂಬದ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶುರುವಾಗಿದೆ ಮೊರಾರ್ಜಿ ವಸತಿ ಶಾಲೆ. ಕಟ್ಟಡವೇನೊ ಹೊಸದಾಗಿದೆ. ಆದರೆ, ಮೂಲಭೂತ ಸೌಕರ್ಯಗಳಿಲ್ಲದೆ ವಸತಿ ಶಾಲೆ ಮಕ್ಕಳು ತಮ್ಮ ವಿದ್ಯಾಭ್ಯಾಸ ಮುಂದುವರೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಮತ್ತು ಗೌರಿಬಿದನೂರು ರಸ್ತೆಯ ಪಕ್ಕದಲ್ಲಿಯೇ ಸುಂದರವಾದ ವಸತಿಶಾಲೆ ತಲೆ ಎತ್ತಿದೆ, ಖಾಸಗಿ ರೆಸಿಡೆನ್ಸಿ ಶಾಲೆಗಿಂತ ತಾನೇನು ಕಡಿಮೆ ಇಲ್ಲ ಎಂಬಂತೆ ಸಜ್ಜಿತವಾದ ಮೊರಾರ್ಜಿ ವಸತಿ ಶಾಲೆ ಪ್ರಾರಂಭವಾಗಿದ್ದು. ಕಳೆದ ಮೂರು ವರ್ಷಗಳಿಂದ ನೂತನ ಕಟ್ಟಡದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಹೈಸ್ಕೂಲ್ ನಲ್ಲಿ 250 ಮತ್ತು ಪಿಯುಸಿಯಲ್ಲಿ 140 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡ. ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದುರ್ಬಲ ವರ್ಗಕ್ಕೆ ಸೇರಿದ ಸಮುದಾಯದ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಸುಸಜ್ಜಿತವಾದ ಕಟ್ಟಡ ಇದೆ.ಆದರೆ, ಮೂಲಭೂತ ಸೌಕರ್ಯಗಳು ಕೊರತೆಯೇ ಈ ವಸತಿ ಶಾಲೆಯ ದೊಡ್ಡ ಸಮಸ್ಯೆ. ಮಕ್ಕಳು ಮಲಗಲು ಮಂಚವಿಲ್ಲ, ಹೊದ್ದುಕೊಳ್ಳಲು ಹೊದಿಕೆ ಇಲ್ಲ. ಸೋಲಾರ್ ವ್ಯವಸ್ಥೆ ಅಳವಡಿಸದ ಕಾರಣ ಮಕ್ಕಳು ಬಿಸಿ ನೀರಿನಿಂದ ವಂಚಿತರಾಗಿ ಎಂಥಹ ಚಳಿಗಾಲ ಬಂದರೂ ಸ್ನಾನ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ.
ಇನ್ನು ತರಗತಿಯಲ್ಲಿ ಕೂರಲು ಬೆಂಚ್ ಸಹ ಇಲ್ಲ. ಮಕ್ಕಳಿಗೆ ಪ್ರಮುಖವಾಗಿಯೇ ಬೇಕಾದ ಸೌಲಭ್ಯಗಳೇ ಇಲ್ಲದಿರುವುದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಕೆಟ್ಪ ಪರಿಣಾಮ ಬೀರುವ ಸಾಧ್ಯತೆ ಇದೆ. ಇತ್ತಿಚೆಗೆ ವಸತಿ ಶಾಲೆಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ವಸತಿ ಶಾಲೆಗೆ ಬೇಕಾದ ಸೌಲಭ್ಯಗಳನ್ನು ಶೀಘ್ರದಲ್ಲೇ ಒದಗಿಸುವ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ ವಸತಿ ಶಾಲೆಗಳು ಸೇರಿದಂತೆ ಒಟ್ಟು 840 ವಸತಿ ಶಾಲೆಗಳಿವೆ . ಪ್ರತಿಯೊಂದು ಶಾಲೆಗಳನ್ನು ಎಬಿಸಿಡಿ ಕ್ಯಾಟಗೆರಿ ಮಾಡಿ ಎಲ್ಲಾ ಶಾಲೆಗಳನ್ನು ಎ ಗ್ರೇಡ್ ತರುವುದಾಗಿ ಹೇಳಿದ್ದಾರೆ. ನಮ್ಮ ವಸತಿ ಶಾಲೆಗಳಿಗೆ ರಾಷ್ಟ್ರೀಯ ಮಟ್ಟದ ಗುಣಮಟ್ಟ ಸೌಲಭ್ಯ ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.