ಆನೇಕಲ್/ಬೊಮ್ಮನಹಳ್ಳಿ: ಉದ್ಯೋಗ ಸಿಗದ ಇಂದಿನ ದಿನಗಳಲ್ಲಿ ಕೆಲ ಖಾಸಗಿ ಸಂಸ್ಥೆಗಳು ಉದ್ಯೋಗ ಮೇಳ ನಡೆಸುವ ಮೂಲಕ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿವೆ.
ಬೆಂಗಳೂರು-ಹೊಸೂರು ರಸ್ತೆಯ ಬೊಮ್ಮನಹಳ್ಳಿ ಆಕ್ಸ್ಫರ್ಡ್ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ನಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿವಿಲ್ ಟ್ರೇಡ್ ವ್ಯಾಸಂಗ ಮಾಡಿದ ಐಟಿಐ, ಡಿಪ್ಲಮೋ, ಬಿ.ಟೆಕ್, ಬಿ.ಇ ಮುಗಿಸಿದ ನಾಲ್ಕು ಸಾವಿರ ಮಂದಿ ಸಂದರ್ಶನಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದರು. ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ತಮಿಳುನಾಡು ಮೂಲದ 60 ಖಾಸಗಿ ಕಂಪನಿಗಳು ಉದ್ಯೋಗ ನೀಡಲು ಮುಂದೆ ಬಂವೆ.
ಉದ್ಯೋಗ ನೀಡಿಕೆಯಲ್ಲಿ ಸ್ಥಳೀಯರಿಗೆ ಹಾಗೂ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿತ್ತು. ಸಂದರ್ಶನಕ್ಕೆ ಹಾಜರಾದ 4,000 ವಿದ್ಯಾರ್ಥಿಗಳಲ್ಲಿ 1,251 ಜನ ಯುವತಿಯರಿದ್ದರು. ಕ್ಯಾಂಪಸ್ ಸಂದರ್ಶನ ಕ್ಷೀಣವಾಗುತ್ತಿರುವ ಕಾಲಘಟ್ಟದಲ್ಲಿ, ಪ್ರತಿ ಕಾಲೇಜುಗಳಲ್ಲಿಯೂ ಇಂತಹ ಉದ್ಯೋಗ ಮೇಳಗಳು ನಡೆದಲ್ಲಿ ಅನುಕೂಲವಾಗುತ್ತದೆ, ಈ ಹಿಂದೆ ನಡೆದ ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆದು ಉತ್ತಮ ವೇತನ ಪಡೆಯುತ್ತಿದ್ದಾರೆಂದು ಕಾಲೇಜಿನ ಹಳೆ ವಿದ್ಯಾರ್ಥಿ ತಿಳಿಸಿದರು.
ಮೇಳ ಉದ್ಘಾಟಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೇಂದ್ರೀಕೃತ ನಿಯೋಜನೆ ಕೋಶದ ನಿರ್ದೇಶಕ ಡಾ.ಬಿನೊಯ್ ಮ್ಯಾಥ್ಯೂ ಮಾತನಾಡಿ ‘ಪ್ರತಿವರ್ಷ 1.25 ಮಿಲಿಯನ್ ಇಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. 100 ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಕೇವಲ 12 ಜನರಿಗೆ ಮಾತ್ರವೇ ಉದ್ಯೋಗ ಸಿಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಕೆಯ ಜತೆಗೆ, ಸಂವಹನ ಕೌಶಲ್ಯತೆ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕಕರೆ ನೀಡಿದರು.