ಬೆಂಗಳೂರು: ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮುಂದಿನ ಸಭೆಯಲ್ಲಿ ಎಲ್ಲ ಮಾಹಿತಿಯನ್ನು ಪಡೆದುಕೊಂಡು ಬರಬೇಕು ಎಂದು ತಾಕೀತು ಹಾಕುವ ಮೂಲಕ ಶಾಸಕ ನಿಸರ್ಗ ನಾರಾಯಣಸ್ವಾಮಿ ಅಧಿಕಾರಿಗಳ ವಿರುದ್ಧ ಗರಂ ಆದರು.
ದೇವನಹಳ್ಳಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ, ಅಧಿಕಾರಿಗಳು ಮಾಹಿತಿ ಕೊರತೆಯಿಂದ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾದರು. ಈ ವೇಳೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾಹಿತಿ ಕೊರತೆ ಇದ್ದರೆ ಏಕೆ ಬರಬೇಕು. ಪೂರ್ತಿಯಾಗಿ ಅಭಿವೃದ್ಧಿ ಕಾರ್ಯಗಳು ಹಾಗೂ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಪಡೆದು ಬರಬೇಕು. ಮುಂದಿನ ಸಭೆಯಲ್ಲಿ ಎಲ್ಲ ಮಾಹಿತಿ ಸರಿಯಾಗಿ ನೀಡಬೇಕು ಎಂದು ಸೂಚನೆ ನೀಡಿದರು.
ಆರಂಭದಲ್ಲಿ ಕೃಷಿ ಇಲಾಖೆ ಅಧಿಕಾರಿಯನ್ನು ನಿಮ್ಮ ಇಲಾಖೆಯಿಂದ ರೈತರಿಗೆ ಯಾವ ಯೋಜನೆ ನೀಡಿದ್ದಿರಿ.? ಎಷ್ಟು ಹಣ ಬಿಡುಗಡೆಯಾಗಿದೆ..? ಬೆಳೆ ನಷ್ಟ ಪರಿಹಾರವೇನು..? ಎಷ್ಟು ಜನ ಪಲಾನುಭವಿಗಳಿದ್ದಾರೆ.? ಎಂಬ ಹಲವು ಪ್ರಶ್ನೆಗಳನ್ನು ಕೇಳಿದ್ದು, ಈ ವೇಳೆ ಅದರ ಬಗ್ಗೆ ಮಾಹಿತಿ ನೀಡುವಲ್ಲಿ ಕೃಷಿ ಇಲಾಖೆ ಅಧಿಕಾರಿ ವಿಫಲರಾದ್ರು. ಈ ವೇಳೆ ಅವರನ್ನು ತರಾಟೆಗೆ ತೆಗೆದುಕೊಂಡು ಮುಂದಿನ ಸಭೆಯಲ್ಲಿ ಸರಿಯಾಗಿ ಮಾಹಿತಿ ಪಡೆದು ಬನ್ನಿ ಎಂದರು.
ಇದರ ಜತೆಗೆ ತೋಟಗಾರಿಕೆ, ರೇಷ್ಮೆ ಇಲಾಖೆಯಲ್ಲಿ ರೈತರ ಅಭಿವೃದ್ಧಿ ಕುರಿತು ಮಾಹಿತಿ ಪಡೆದ ಶಾಸಕರು, ಯಾವುದೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ. ರೈತರಿಗೆ ಪ್ರಮುಖವಾಗಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಿಂದ ಸಾಕಷ್ಟು ಯೋಜನೆಗಳು ಇವೆ. ಮೂರು ಇಲಾಖೆಗಳು ಒಂದಾಗಿ ರೈತರಿಗೆ ಅನುಕೂಲವಾಗುವಂತೆ ಮಾಡಬೇಕು. ಅವರ ಕಷ್ಟಗಳಿಗೆ ಸ್ಪಂದಿಸಿ, ಅವರು ಸಮಸ್ಯೆಯಿಂದ ಮುಕ್ತರಾಗಿ ಮನೆಗೆ ಹೋಗುವಂತ ಕೆಲಸ ಮಾಡಬೇಕು. ಇದಕ್ಕೆ ಸರ್ಕಾರದಿಂದ ಏನೆಲ್ಲಾ ಯೋಜನೆಗಳಿಂದ ಹಣ ಬಿಡುಗಡೆ ಸೇರಿದಂತೆ ಏನೆಲ್ಲಾ ಕೆಲಸ ಆಗಬೇಕೋ ಅದನ್ನು ನಾನು ಮಾಡಿಕೊಡುತ್ತೇನೆ ಎಂದರು.