ದೊಡ್ಡಬಳ್ಳಾಪುರ: ಎಪಿಎಂಸಿ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಮಯ ವಿಸ್ತರಿಸಲಾಗುವುದೆಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ರೈತರ ಸಮಸ್ಯೆಗಳನ್ನು ಆಲಿಸಿದರು.
ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂಜಾನೆ 4 ರಿಂದ 6 ಗಂಟೆಗೆ ಇದ್ದ ಸಮಯವನ್ನು ಮುಂಜಾನೆ 4 ಗಂಟೆಯಿಂದ ಬೆಳಗ್ಗೆ 10ಗೆ ವಿಸ್ತರಣೆ ಮಾಡಲಾಗುವುದು ಎಂದರು.
ರೈತರ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಯಾವುದೇ ರೀತಿಯ ತಡೆ ಇಲ್ಲ. ಚೆಕ್ ಪೋಸ್ಟ್ನಲ್ಲಿ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಅನುವು ಮಾಡಿಕೊಡಲಾಗಿದೆ. ಹಸಿವಿನಿಂದ ಯಾರೂ ಸಹ ಸಾಯಬಾರದೆನ್ನುವ ಕಾರಣಕ್ಕೆ ಕಾರ್ಮಿಕರಿಗೆ 750 ರೂಪಾಯಿ ಮೌಲ್ಯದ ಆಹಾರದ ಪ್ಯಾಕೇಜ್ಗಳ ವಿತರಣೆ ಮಾಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 20 ಸಾವಿರ ಪ್ಯಾಕೇಜ್ ಕಳಿಸಲಾಗಿದೆ.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೈತರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಅನುಮತಿ ಪಡೆದ ರೈತರು ಅಪಾರ್ಟ್‌ಮೆಂಟ್ ಬಳಿ ತಾವು ಬೆಳೆದ ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿಯನ್ನು ಹೋಲ್ ಸೇಲ್ ದರದಲ್ಲಿ ಮಾರಬಹುದು ಎಂದು ತಿಳಿಸಿದರು.
ಪಡಿತರ ವಿತರಣೆಯನ್ನು ಸರ್ಕಾರ ಉಚಿತವಾಗಿ ಮಾಡುತ್ತಿದ್ದು ಕೆಲವು ಕಡೆ ಹಣ ತೆಗೆದುಕೊಳ್ಳುವ ಬಗ್ಗೆ ದೂರು ಬಂದಿದ್ದು ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದೆಂದು ಎಚ್ಚರಿಸಿದರು.