ಆನೇಕಲ್:ತಾಲೂಕು ಕಚೇರಿಯಲ್ಲಿ ರೈತರ ಯಾವುದೇ ಕೆಲಸವಾಗಬೇಕಾದರೂ ಲಂಚ ನೀಡಬೇಕು. ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಧಿಕಾರಿಗಳಿಗಾಗಿ ಕಚೇರಿ ಬಾಗಿಲಿನಲ್ಲಿ ಗಂಟೆಗಟ್ಟಲೇ ಕಾಯಬೇಕಾಗುತ್ತೆ. ಕೂಡಲೇ ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ಕಚೇರಿ ಎದುರು ಭಾರತೀಯ ಕಿಸಾನ್ ಸಂಘ ಪ್ರತಿಭಟನೆ ನಡೆಸಿತು.
ಸಕಾಲ, ಪಹಣಿ ಕೇಂದ್ರ ಇನ್ನಿತರೆ ಉಪ ಕಚೇರಿಗಳು ಯಾವಾಗಲೂ ಬೀಗ ಹಾಕಿರುತ್ತವೆ. ಬಾಗಿಲು ಯಾವಾಗ ತೆರೆಯುತ್ತಾರೆ, ಅಧಿಕಾರಿಗಳು ಯಾರು ಎಂಬುದೇ ತಿಳಿಯುವುದಿಲ್ಲ. ಇವರ ಬೇಜವಾಬ್ದಾರಿಯಿಂದ ರೈತರು ಸಂಕಟ ಅನುಭವಿಸಬೇಕಾಗಿದೆ ಎಂದು ಸಂಘದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಕೆರೆಗಳು, ರಾಜಕಾಲುವೆಗಳನ್ನು ಉಳಿಸುವ ಬದ್ಧತೆ ತೋರಿದರೆ, ಸರ್ಕಾರಿ ಅಧಿಕಾರಿಗಳು ಭೂ ಕಬಳಿಕೆದಾರರ ಪರ ನಿಲ್ಲುತ್ತಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಮಾದವ ಪ್ರಸಾದ್ ಆರೋಪಿಸಿದರು.
ಕೂಡಲೇ ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು. ಅಗತ್ಯ ಸೌಲಭ್ಯಗಳೊಂದಿಗೆ, ರೈತ ಸ್ನೇಹಿ ಆಡಳಿತ ತರಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂಡುವುದಾಗಿ ರೈ ಮುಖಂಡರು ಎಚ್ಚರಿಕೆ ನೀಡಿದರು.