ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿಗೆ ಒಳಗಾದ ತಮ್ಮ ಅನುಭವವನ್ನು ಹಂಚಿಕೊಂಡ ಜಿಲ್ಲಾಧಿಕಾರಿಗಳು, ಕೊರೊನಾ ಪಾಸಿಟಿವ್ ಅಂದಾಗ ಎಂಥವರಿಗೂ ಆತಂಕ ಆಗುತ್ತದೆ ಎಂದರು.
ಆದರೆ ಸರ್ಕಾರ, ಅಧಿಕಾರಿಗಳು ಸೇರಿ ಎಲ್ಲರೂ ನನಗೆ ಧೈರ್ಯ ತುಂಬಿದರು. ಇದರಿಂದ ನನ್ನ ಮನೋಸ್ಥೈರ್ಯ ಹೆಚ್ಚಾಯಿತು. ನನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಯುತ್ತಿದ್ದಂತೆ ಮನೆಯಲ್ಲಿ ಸೆಲ್ಫ್ ಕ್ವಾರಂಟೈನ್ಗೆ ಒಳಗಾಗಿದ್ದೆ. ಸ್ವಲ್ಪ ಜ್ವರ ಇದ್ದಿದ್ದರಿಂದ ಆಸ್ಪತ್ರೆಗೆ ದಾಖಲಾದೆ ಆಸ್ಪತ್ರೆಯಲ್ಲಿ 10 ದಿನಗಳ ಕಾಲ ಚಿಕಿತ್ಸೆ ನೀಡಿದರು. ಒಂದೆರಡು ದಿನದಲ್ಲಿ ಜ್ವರದಿಂದ ಗುಣಮುಖನಾದೆ. ಆದರೆ ಕೊರೊನಾ ಲಕ್ಷಣಗಳು ಹಾಗೆಯೇ ಇತ್ತು ಎಂದರು.
ಸ್ವಲ್ಪ ಆಯಾಸ, ಆಹಾರದ ರುಚಿ ತಿಳಿಯುತ್ತಿರಲಿಲ್ಲ. ಕ್ವಾರಂಟೈನ್ನಲ್ಲಿ ಯೋಗ, ಪ್ರಾಣಯಾಮ, ಧ್ಯಾನ ಮಾಡುತ್ತಾ ಕಚೇರಿ ಕೆಲಸ ಸಹ ಮಾಡುತ್ತಿದ್ದೆ. ಕೊರೊನಾ ಸೋಂಕಿಗೆ ಒಳಗಾದವರು ಆತಂಕ, ಭಯ ಪಡದೆ ವೈದ್ಯರ ಸಲಹೆ ಅನುಸರಿಸಿ, ಬಿಸಿ ನೀರು ಕುಡಿಯುತ್ತಿರಿ. ವೈದ್ಯರು ಹೇಳಿದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ತೆಗೆದುಕೊಳ್ಳಿ. ಹಿರಿಯ ಜೀವಿಗಳು ಮನೆಯಿಂದ ಅನವಶ್ಯಕವಾಗಿ ಓಡಾಡಬೇಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಜನಸಾಮಾನ್ಯರಿಗೆ ಸಲಹೆ ನೀಡಿದರು.