ದೊಡ್ಡಬಳ್ಳಾಪುರ: ನೋಡೋಕೇ ಒಂದು ಮಟ್ಟಿಗೆ ಹೀರೋ ಥರಾ ಇರೋ ಈತ ಜಿಮ್ ಕೇಂದ್ರದ ಮಾಲೀಕ. ತಾನು ಸ್ಮಾರ್ಟ್ ಆಗಿರೋದನ್ನೇ ಬಂಡವಾಳ ಮಾಡ್ಕೊಂಡ ಈತ ಹುಡುಗಿಯರ ಜೊತೆ ಚಕ್ಕಂದ ಆಡೋದನ್ನ ಖಯಾಲಿ ಮಾಡ್ಕೊಂಡಿದ್ದ ಎನ್ನಲಾಗ್ತಿದೆ. ಸದ್ಯ ಆತನ ರಾಸಲೀಲೆಯಿಂದ ಮೂವರು ಹೆಣ್ಣು ಮಕ್ಕಳ ಬಾಳಿಗೆ ಬೆಂಕಿ ಬಿದ್ದಿದೆ ಅನ್ನೋ ಆರೋಪ ಕೇಳಿಬಂದಿದೆ.
ದೊಡ್ಡಬಳ್ಳಾಪುರ ನಗರದ ಕೋರ್ಟ್ ರಸ್ತೆಯಲ್ಲಿರುವ ಬುಲೆಟ್ ಜಿಮ್ ಮಾಲೀಕ ಈ ಗೌತಮ್. ಜಿಮ್ ಟ್ರೈನರ್ ಕೂಡಾ ಹೌದು. ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಜಿಮ್ಗೆ ಬರುತ್ತಿದ್ದ ಹುಡುಗಿಯರ ಜೊತೆ ಪ್ರೀತಿಯ ನಾಟಕವಾಡಿ, ತನ್ನತ್ತ ಸೆಳೆಯುತ್ತಿದ್ದ. ಈತನ ಸಹವಾಸದಿಂದ ಓರ್ವಳು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ಅಂತ್ಯ ಕಂಡಿದ್ದಾಳೆ ಎಂದು ದೂರಲಾಗಿದೆ.
![gym trainer](https://etvbharatimages.akamaized.net/etvbharat/prod-images/kn-bng-nel-120519-bodybiluder-ka10019-guruprasadhp_13052019005413_1305f_1557689053_358.jpg)
ಅಂದ, ಚೆಂದದ ಶ್ರೀಮಂತ ಹುಡುಗಿಯರೇ ಇವನ ಟಾರ್ಗೆಟ್...
ದೊಡ್ಡಬಳ್ಳಾಪುರದಲ್ಲಿ ಬುಲೆಟ್ ಅಂತಾನೇ ಕರೆಸಿಕೊಳ್ಳುತ್ತಿದ್ದ ಗೌತಮ್, ತನ್ನ ಅಡ್ಡ ಹೆಸರಾದ ಬುಲೆಟ್ ಅನ್ನೇ ತನ್ನ ಜಿಮ್ಗೂ ಇಟ್ಟಿದ್ದ. ಇಲ್ಲಿ ಪುರುಷ ಮತ್ತು ಮಹಿಳೆಯರಿಗೆ ದೈಹಿಕ ಫಿಟ್ನೆಸ್ ಬಗ್ಗೆ ತರಬೇತಿ ನೀಡುತ್ತಿದ್ದ. ಕೆಲವು ಪ್ರತಿಷ್ಠಿತ ಮನೆಯ ಹೆಣ್ಣು ಮಕ್ಕಳು ಬುಲೆಟ್ ಜಿಮ್ಗೆ ಬರುತ್ತಿದ್ರು. ಹೀಗೆ ಬರುತ್ತಿದ್ದ ಅಂದವಾದ ಮತ್ತು ಶ್ರೀಮಂತ ಹುಡುಗಿಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗ್ತಿದೆ.
ಇನ್ನು ಸ್ಫುರದ್ರೂಪಿಯಾಗಿದ್ದ ಗೌತಮ್ಗೆ ಹುಡುಗಿಯರನ್ನ ಬೀಳಿಸಿಕೊಳ್ಳೋದು ಸುಲಭವೇ ಆಗಿತ್ತು. ಜೊತೆಗೆ ಬಾಡಿ ಬಿಲ್ಡ್ ದೇಹ ಹುಡುಗಿಯರನ್ನ ಸೂಚಿಗಲ್ಲಿನಂತೆ ಸೆಳೆಯುತ್ತಿತ್ತು. ಜಿಮ್ ತರಬೇತಿ ನೀಡುವ ನೆಪದಲ್ಲಿ ಹುಡುಗಿಯರ ಮೊಬೈಲ್ ನಂಬರ್ ತೆಗೆದುಕೊಂಡು ಅವರೊಂದಿಗೆ ಪ್ರೀತಿಯ ನಾಟಕವಾಡಿ ತನ್ನ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದನಂತೆ.
ಜಿಮ್ ತರಬೇತಿಗೆ ಬಂದವಳು ಗರ್ಭಿಣಿಯಾದಳು...
ರಶ್ಮಿ(ಹೆಸರು ಬದಲಾಯಿಸಲಾಗಿದೆ) ಎಂಬ ಹೆಸರಿನ ಯುವತಿ ಸಹ ಬುಲೆಟ್ ಜಿಮ್ಗೆ ಬರುತ್ತಿದ್ದಳು. ಬಣ್ಣದ ಮಾತುಗಳನ್ನಾಡಿ, ಗೌತಮ್ ಈಕೆಯನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಸಹ ಬೆಳೆಸಿದ್ದ. ಅವಳಿಂದ ತನ್ನ ಕಾಮತೃಷೆ ತೀರಿಸಿಕೊಂಡ ಗೌತಮ್, ಬಳಿಕ ಮತ್ತೋರ್ವಳ ಜೊತೆ ಲವ್ವಿಡವ್ವಿ ಶುರುಮಾಡಿದ್ದ. ಅವಳೊಂದಿಗೆ ಮದುವೆ ಆಗೊ ಪ್ರಯತ್ನ ಕೂಡ ನಡೆಸಿದ್ದನಂತೆ.
ಇನ್ನು, ಗೌತಮ್ ದೈಹಿಕ ಸಂಪರ್ಕದಿಂದ ಗರ್ಭಿಣಿಯಾಗಿದ್ದ ಯುವತಿ, ಈ ವಿಷಯವನ್ನು ಗೌತಮ್ಗೆ ತಿಳಿಸಿದ್ದಳು. ಜೊತೆಗೆ ಗೌತಮ್ ತಂದೆಗೂ ತಿಳಿಸಿದ್ದಳಂತೆ. ಆದರೆ ಮಗನಿಗೆ ಬುದ್ಧಿವಾದ ಹೇಳಬೇಕಿದ್ದ ತಂದೆ, ತಾನೇ ಮುಂದೆ ನಿಂತು ಮಗನಿಗೆ ಬೇರೆ ಯುವತಿವೊಂದಿಗೆ ಮದುವೆ ಮಾಡಿಸಿದ್ದ. ಬೇರೆ ದಾರಿ ಇಲ್ಲದೆ ಸಂತ್ರಸ್ತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಗೌತಮ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ದೂರು ಹಿನ್ನಲೆ ಗೌತಮ್ ಮತ್ತು ಆತನ ತಂದೆಯನ್ನ ಪೊಲೀಸರು ಬಂಧಿಸಿದ್ದಾರೆ.
ಗೌತಮ್ ಸಹವಾಸ ಮಾಡಿದಾಕೆ ಆತ್ಮಹತ್ಯೆಗೆ ಶರಣು...
ಗೌತಮ್ ಸಹವಾಸದಿಂದ 24 ವರ್ಷದ ಯುವತಿವೋರ್ವಳು ಆತ್ನಹತ್ಯೆಗೆ ಶರಣಾಗಿದ್ದಾಳೆ. ಅಂದಹಾಗೆ, ಈಕೆ ಸಹ ಗೌತಮ್ ನಡೆಸುತ್ತಿದ್ದ ಜಿಮ್ಗೆ ಹೋಗುತ್ತಿದ್ದಳು. ಗೌತಮ್ ಮತ್ತೊಂದು ಮದುವೆಯಾಗಲು ಈ ಯುವತಿ ಸಹ ಸಹಾಯ ಮಾಡಿದ್ಲು ಎನ್ನಲಾಗ್ತಿದೆ. ಈ ಮದುವೆಗೆ ಅಡ್ಡಿಯಾಗಿದ್ದ ಹುಡುಗಿಗೆ ಗೌತಮ್ ಮತ್ತು ಈ ಯುವತಿ ಇಬ್ಬರು ಅವಾಚ್ಯ ಮಾತುಗಳಿಂದ ನಿಂದಿಸಿ ಬೆದರಿಕೆಯನ್ನು ಹಾಕಿದ್ದರು ಎನ್ನಲಾಗ್ತಿದೆ. ಈ ವಿಡಿಯೋ ನಗರದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ವಿಷಯ ಯುವತಿ ಮನೆಯವರಿಗೂ ಮುಟ್ಟಿದಾಗ ಅವರು ಮಗಳಿಗೆ ಬುದ್ಧಿ ಹೇಳಿದ್ದರು. ಇದರಿಂದ ಮನನೊಂದ ಯುವತಿ ನೇಣಿಗೆ ಕೊರಳೊಡ್ಡುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಗೌತಮ್ ಕೃತ್ಯಕ್ಕೆ ಇಡೀ ದೊಡ್ಡಬಳ್ಳಾಪುರ ನಗರವೇ ಆತನಿಗೆ ಹಿಡಿಶಾಪ ಹಾಕುತ್ತಿದೆ. ಇತ್ತ ಆತನ ಸಹವಾಸ ದೋಷದಿಂದ ಯುವತಿ ಕೂಡ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಆಕೆಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಆಕೆ ಕುಟುಂಬ ಸಾರ್ಥಕತೆ ಮೆರೆದಿದೆ. ಇನ್ನು ಗೌತಮ್ ಪ್ರೀತಿಯ ಮೋಹದಿಂದ ಇನ್ನಿಬ್ಬರ ಬಾಳಿಗೂ ಬೆಂಕಿ ಬಿದ್ದಿದೆ.