ಬಾಗಲಕೋಟೆ : ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಂತ್ರಸ್ತರಿಗೆ ಕೂಡುವ ನಿವೇಶನದ ಹಕ್ಕುಪತ್ರ ವಿತರಣೆ ಸಮಾರಂಭವು, ಶಾಸಕ ಹಾಗೂ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಜರುಗಿತು.
ಪ್ರತಿ ತಿಂಗಳಂತೆ ಒಟ್ಟು ಆರು ಬಾರಿ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಈವರೆಗೆ, ಮೂಲ ಸಂತ್ರಸ್ತರಿಗೆ, ಬಾಡಿಗೆದಾರರಿಗೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ಸೇರಿ ಒಟ್ಟು 777 ಹಕ್ಕು ಪತ್ರವನ್ನು ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಆಡಳಿತ ಮಂಡಳಿ ಸಭೆಯಲ್ಲಿ ನವನಗರದ ಯುನಿಟ್ ಒಂದು ಹಾಗೂ ಎರಡರಲ್ಲಿ, ನಗರಸಭೆಗೆ ಉತಾರ ನೀಡುವುದಕ್ಕೆ, ಕೆಜೆಪಿ ಮಾಡುವುದಕ್ಕೆ, ಪಟ್ಟಣ ಪ್ರಾಧಿಕಾರದಿಂದ 27 ಲಕ್ಷ ರೂ. ನೀಡುವುದು ಮತ್ತು ಹೆಸ್ಕಾಂಗೆ ನೀಡಬೇಕಾಗಿರುವ ವಿದ್ಯುತ್ ಬಿಲ್ ಒಂದು ಕೋಟಿಗೂ ಅಧಿಕ ಹಣ ಬಾಕಿ ಇದ್ದು, ಅದನ್ನು ಪಾವತಿಸುವ ಕುರಿತು ಚರ್ಚೆ ಮಾಡಲಾಗಿದೆ ಎಂದರು.
ಓದಿ-ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಸಂಪುಟ ವಿಸ್ತರಣೆ ಮಾತುಕತೆಯಲ್ಲಿ ಬ್ಯುಸಿಯಾದ ಸಚಿವ!
ಅಲ್ಲದೆ, ನಗರದಲ್ಲಿ 280ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಹರಾಜ್ ಮಾಡುವುದು, ಇಲ್ಲವೇ, ಈಗ ಯಾರು ಇದ್ದಾರೆ ಅವರಿಗೆ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಜೊತೆಗೆ ಕಾರ್ನರ್ ಸೈಟ್ಗಳ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.
ದೊಡ್ಡ ಕುಟುಂಬಕ್ಕೆ ಚಿಕ್ಕ ನಿವೇಶನ ಸಾಲದು : ಈ ಸಮಯದಲ್ಲಿ ಬಸಪ್ಪ ಎಂಬ ಸಂತ್ರಸ್ತರು ತಮ್ಮ ಅಭಿಪ್ರಾಯ ಹಂಚಿಕೊಂಡು, ಆಲಮಟ್ಟಿ ಹಿನ್ನೀರಿನಲ್ಲಿ ಸಾಕಷ್ಟು ಜಮೀನು ಕಳೆದುಕೊಂಡಿದ್ದೆ. ಪ್ರಾಧಿಕಾರದಿಂದ ಕೇವಲ ಒಂದು ಚಿಕ್ಕ ನಿವೇಶನ ನೀಡಲಾಗುತ್ತಿದೆ.
ಇದರಲ್ಲಿ ನಾಲ್ಕು ಜನ ಸಹೋದರರು ಹೇಗೆ ಹಂಚಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದರು. ಅಲ್ಲದೆ, ನವನಗರ ಅಭಿವೃದ್ಧಿಗಾಗಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಹೆಚ್ಚಿನ ನಿವೇಶನ ನೀಡುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.