ಬಾಗಲಕೋಟೆ: ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ವತಿಯಿಂದ ತಿಂಗಳ ಕಾಲ ವಿಜಯಪುರದ ಜ್ಞಾನಯೋಗಾಶ್ರಮ ಸಿದ್ಧೇಶ್ವರ ಸ್ವಾಮೀಜಿಗಳ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ ಎಂದು ಶಾಸಕರೂ ಆಗಿರುವ ಸಮಿತಿ ಅಧ್ಯಕ್ಷ ವೀರಣ್ಣ ಚರಂತಿಮಠ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವನಗರದ ಕಲಾಭವನದ ಬಯಲು ರಂಗಮಂದಿರದಲ್ಲಿ ಜ.20ರಿಂದ ತಿಂಗಳ ಕಾಲ ಬೆಳ್ಳಿಗೆ 6.30 ರಿಂದ 7.30ರವರೆಗೆ ಪ್ರವಚನ ನಡೆಯಲಿದೆ ಎಂದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಸಿದ್ಧೇಶ್ವರ ಸ್ವಾಮೀಜಿ ಈ ಭಾಗದಲ್ಲಿ ನಡೆದಾಡುವ ದೇವರೆಂದೇ ಎಂದು ಖ್ಯಾತಿ ಪಡೆದಿದ್ದಾರೆ. ಒಂದು ತಿಂಗಳ ಕಾಲ ಪ್ರವಚನ ನೀಡಲು ಒಪ್ಪಿರುವುದು ನಮ್ಮ ಸೌಭಾಗ್ಯ ಎಂದು ತಿಳಿಸಿದರು.
ಜ.20ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಚರಂತಿಮಠದ ಪ್ರಭು ಸ್ವಾಮೀಜಿ, ಇಳಕಲ್ ಗುರು ಮಹಾಂತ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಸಿದ್ದೇಶ್ವರ ಶ್ರೀಗಳ ಪ್ರವಚನ ಹಿನ್ನೆಲೆ ನಿತ್ಯ ಬೆಳಗಿನ ಜಾವ ಬಾಗಲಕೋಟೆ, ವಿದ್ಯಾಗಿರಿ ಸೇರಿದಂತೆ ಬಾದಾಮಿ, ಇಳಕಲ್, ಹುನಗುಂದ, ಬೀಳಗಿ ತಾಲೂಕಿನಿಂದ ರಸ್ತೆ ಸಾರಿಗೆ ಸಂಸ್ಥೆ ವಾಹನ ವ್ಯವಸ್ಥೆಯನ್ನೂ ಮಾಡಿದೆ.