ಬಾಗಲಕೋಟೆ: ಕಾಂಗ್ರೆಸ್ ಪಕ್ಷ ಅಂದರೆ ಒಂದು ಮನೆ ಇದ್ದಂತೆ. ಅದರಲ್ಲಿ ಅಣ್ಣ-ತಮ್ಮಂದಿರ ಜಗಳ ಸಹಜ. ಆದರೆ ಇದೀಗ ವೈಮನಸ್ಸು ದೂರಾಗಿ, ಎಲ್ಲರೂ ಒಗ್ಗಟಾಗಿ ಚುನಾವಣೆ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಜಯಗಳಿಸುವುದು ಖಚಿತ ಎಂದು ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪ್ರೇಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಗಿದ್ದಾಗಿನಿಂದಲೂ ಪಕ್ಷದ ಸದಸ್ಯರಲ್ಲಿ ಹಾಗೂ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಿತ್ತು. ಆದರೆ ಇದೀಗ ಎಲ್ಲ ಅಸಮಾಧಾನ ಶಮನಗೊಂಡಿದ್ದು, ಪಕ್ಷದ ಸಂಘಟನೆಗಾಗಿ ಕೆಲಸ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಇದ್ದ ಸಮಯದಲ್ಲಿ ಗ್ರಾಮ ವಾಸ್ತವ್ಯ ಸೇರಿದಂತೆ, ಸ್ವಚ್ಚತಾ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿ, ಜಿಲ್ಲೆಯ ತುಂಬ ಗಮನ ಸೆಳೆಯಲಾಗಿದೆ. ಜನತೆಯ ಅನುಕೂಲಕ್ಕಾಗಿ ಪಕ್ಷಾತೀತ, ಜಾತ್ಯಾತೀತವಾಗಿ ಕೆಲಸ ನಿರ್ವಹಿಸಿದ್ದೇನೆ. ಈಗಲೂ ಪ್ರಚಾರಕ್ಕೆ ಹೋದ ಸಮಯದಲ್ಲಿ ಜಿ.ಪಂ ಅಧ್ಯಕ್ಷೆ ಎಂದು ಅಭೂತ ಪೂರ್ಣ ಬೆಂಬಲ ದೂರಕುತ್ತಿದೆ. ಈ ಬಾರಿ ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಲಾಗುತ್ತಿದೆ ಎಂದು ವೀಣಾ ಕಾಶಪ್ಪನವರ ತಿಳಿಸಿದರು.
ಜಿಲ್ಲೆಯಲ್ಲಿ ಮುಳಗಡೆ ಸಮಸ್ಯೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಪ್ರವಾಸಿ ತಾಣ ಅಭಿವೃದ್ಧಿ, ನೇಕಾರರ ಸಮಸ್ಯೆಯನ್ನು ಬಗೆ ಹರಿಸುವುದಕ್ಕೆ ಜವಳಿ ಪಾರ್ಕ್ ನಿರ್ಮಾಣ ಹಾಗೂ ಮಹಾದಾಯಿ ನದಿ ಜೋಡಣೆ, ರೈತರ ಸಮಸ್ಯೆಗಳ ಬಗ್ಗೆ ಹೆಚ್ಚು ಒತ್ತು ನೀಡಿ, ಜಿಲ್ಲೆಯ ಅಭಿವೃದ್ಧಿಗೆ ಗಮನ ಹರಿಸಲಾಗುವುದು.ಇಂತಹ ವಿಷಯಗಳನ್ನು ಮತದಾರರ ಗಮನಕ್ಕೆ ತಂದು ಪ್ರಚಾರ ಕಾರ್ಯ ತಂತ್ರ ರೂಪಿಸಲಾಗುತ್ತದೆ ಎಂದರು.