ಬಾಗಲಕೋಟೆ: ಬಾದಾಮಿ ವಿಧಾನಸಭೆ ಕ್ಷೇತ್ರದ ಕೆರೂರು ಏತ ನೀರಾವರಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.
ಕೆರೂರು ಏತ ನೀರಾವರಿ ಯೋಜನೆ ಜಾರಿಗೆ ತರುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಬಾದಾಮಿ ಕ್ಷೇತ್ರದ ನಿಯೋಗವೊಂದು ಬೆಂಗಳೂರಿಗೆ ತೆರಳಿ, ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದೆ. ಬಳಿಕ ಯಡಿಯೂರಪ್ಪ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಿದ್ದರಾಮಯ್ಯ, 2018-19ನೇ ಸಾಲಿನ ಬಜೆಟ್ನಲ್ಲಿ 525 ಕೋಟಿ ರೂ. ವೆಚ್ಚದ ಕೆರೂರು ಏತ ನೀರಾವರಿ ಯೋಜನೆ ಘೋಷಣೆಯಾಗಿ, 300 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಲಾಗಿತ್ತು.
ಆದರೆ, ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಮುಂಬರುವ ಬಜೆಟ್ನಲ್ಲಿ ಯೋಜನೆ ಜಾರಿಗೆ ಅನುದಾನ ಮಂಜೂರು ಮಾಡಬೇಕು. ಜೊತೆಗೆ ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ 1,800 ಕೋಟಿ ರೂ. ವೆಚ್ಚದ ಕಾಮಗಾರಿಗಳ ಸಂಬಂಧ ಸಲ್ಲಿಸಿರುವ ಪ್ರಸ್ತಾವನೆ ಕುರಿತಾಗಿಯೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಓದಿ: ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ: ಓರ್ವ ಆರೋಪಿ ಅರೆಸ್ಟ್
ಕೆರೂರು ಏತ ನೀರಾವರಿ ಯೋಜನೆ ಸಂಬಂಧ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೂ ದೂರವಾಣಿ ಮೂಲಕ ಮಾತನಾಡಿದ ಸಿದ್ದರಾಮಯ್ಯ, ಯೋಜನೆ ಜಾರಿಗೆ ತರದಿದ್ದರೆ, ವಿಧಾನಸಭೆಯಲ್ಲಿ ಧರಣಿ ನಡೆಸುವುದಾಗಿ ಹೇಳಿದರು.