ಬಾಗಲಕೋಟೆ : ಸಚಿವ ಸಂಪುಟದ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳ ಪರಮಾಧಿಕಾರ ಇದೆ. ಪಕ್ಷದ ಮುಖಂಡರು,ರಾಜ್ಯ ಮುಖಂಡರು, ರಾಷ್ಟ್ರೀಯ ನಾಯಕರು, ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ನಗರದ ತೋಟಗಾರಿಕೆ ಮೇಳದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಸ್ನೇಹಿತರು ಅಥವಾ ಮಾಧ್ಯಮದವರ ಮುಂದೆ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದರೆ ಕೇಳಿಕೊಳ್ಳಿ, ಸುಮ್ಮನೆ ಯಾರಾದರೂ ಹೇಳಿದ್ದರೆ, ನನ್ನೇಕೆ ಹೊಣೆಗಾರನನ್ನಾಗಿ ಮಾಡುತ್ತಿದ್ದೀರಿ.
ಚರ್ಚೆ ಆಗುತ್ತಿದೆ ನಿಜ. ಆದರೆ, ನಾನು ಎಲ್ಲೂ ಮುಂದಿನ ಸಿಎಂ ವಿಚಾರವಾಗಿ ಮಾತನಾಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರ ನಮ್ಮ ನಡುವೆ 30 ವರ್ಷದ ಕುಟುಂಬ ಸಂಬಂಧ ಇದೆ ಎಂದರು.
ನನ್ನ ಹಿರಿಯ ಅಣ್ಣನಂತೆ ಅವರು ಇದ್ದಾರೆ. ಕಾರ್ಖಾನೆ ವಿಷಯ ಇರಲಿ, ವೈಯಕ್ತಿಕ ಸಂಬಂಧ ಇರಲಿ ನೇರವಾಗಿ ಮೊಟ್ಟ ಮೊದಲು ಹೇಳುವುದೇ ಬೊಮ್ಮಾಯಿ ಅವರಿಗೆ. ನಾನ್ಯಾವತ್ತೂ ಹುಬ್ಬಳ್ಳಿಗೆ ಹೋದರೆ, ಅವರ ಮನೆಗೆ ಹೋಗಿ ಚಹಾ ಕುಡಿಯಲಾರದೇ ಮುಂದೆ ಹೋಗುವುದಿಲ್ಲ.
ಬೊಮ್ಮಾಯಿಯವರು ಬೆಂಗಳೂರಿನಲ್ಲಿ ಇದ್ದರೆ ಪ್ರತಿ ವಾರ ನಮ್ಮ ಮನೆಗೆ ಊಟಕ್ಕೆ ಬರದೇ ಇರುವುದಿಲ್ಲ. ಇಂತಹ ಒಳ್ಳೆಯ ಸಂಬಂಧ ಇರುವುದರಿಂದ ಈ ಸಂಬಂಧವನ್ನು ದೂರ ಮಾಡುವ ಕಾಣದ ಕೈ ಇರಬೇಕು ಎಂದರು.
ಸಿಎಂ ಬದಲಾವಣೆ, ಈಶ್ವರಪ್ಪ ಸೇರಿ ಕೆಲ ಬಿಜೆಪಿ ನಾಯಕರ ಹೋಟೆಲ್ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುರಗೇಶ ನಿರಾಣಿ, ಹೋಟೆಲ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಈಶ್ವರಪ್ಪ ಸೇರಿ ಎಲ್ಲ ಮಂತ್ರಿಗಳು ಹಾಗೂ ನಾನು ಒಂದೇ ಹೋಟೆಲ್‌ನಲ್ಲಿದ್ದೆವು.
ಎಲ್ಲಾ ಶಾಸಕರು, ಸಚಿವರು ಸೇರಿ ಒಂದೇ ಕಡೆ ಟೀ ಕುಡಿದು, ಊಟ ಮಾಡಿದ್ದೇವೆ. ಆಗ ಕಾಂಗ್ರೆಸ್ ಶಾಸಕರು ಕೂಡ ಭಾಗಿಯಾಗಿದ್ದರು. ನಾವು ಬೇರೆ ಬೇರೆ ಪಕ್ಷದಲ್ಲಿದ್ದರು ಸ್ನೇಹಿತರೆ. ಮೊನ್ನೆ ಸಚಿವ ಉಮೇಶ್ ಕತ್ತಿಯವರು, ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರನ್ನ ಊಟಕ್ಕೆ ಕರೆದಿದ್ದರು.
ಸಂಬಂಧಗಳು ಬೇರೆ, ಪಕ್ಷ ಬೇರೆ. ಎಲೆಕ್ಷನ್ ಸಂದರ್ಭದಲ್ಲಿ ನಾವು ಅವರಿಗೆ ಸಪೋರ್ಟ್ ಮಾಡಿದರೆ ಹೇಳಬಹುದು. ನಾವು ಒಂದೇ ಪಕ್ಷದ ಸಚಿವರ ಜೊತೆ ಟೀ ಕುಡಿದರೆ, ಅದೇ ದೊಡ್ಡ ತಪ್ಪು ಅಂತಾ ಹೇಳಿದರೆ ಅದಕ್ಕೆ ಉತ್ತರ ಇಲ್ಲ ಎಂದರು.
ಸಿಎಂ ಬೊಮ್ಮಾಯಿಗೆ ಕಾಲು ನೋವು, ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳುತ್ತಾರೆಂಬ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಬೊಮ್ಮಾಯಿಯವರು ಎಲ್ಲಿ ಮಾತಾಡಿಲ್ಲ. ನಾನು ಎಲ್ಲೂ ಮಾತಾಡಿಲ್ಲ. ಬೇರೆ ದೇಶಕ್ಕೆ ಹೋಗುತ್ತಾರೆ ಎಂದು ನೀವು ಹೇಗೆ ಹೇಳುತ್ತೀರಿ ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡಿದ ನಿರಾಣಿ, ಬೊಮ್ಮಾಯಿ ಸರ್ ಹೇಳಿದ್ದಾರಾ? ಅವರು ಹೇಳಿಲ್ಲ. ಈ ರೀತಿ ನೀವೇ ಮಾತಾನಾಡುತ್ತಿರೋದು ಎಂದರು.