ಬಾಗಲಕೋಟೆ: ಜಿಲ್ಲಾ ತಂಬಾಕು ನಿಯಂತ್ರಣ ತಂಡ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದೆ.
ಅಂಗಡಿಗಳ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯ್ದೆ-2003ರ 4 ಮತ್ತು 6 ಸೆಕ್ಷನ್ ಉಲ್ಲಂಘಿಸಿದವರ ವಿರುದ್ಧ ಒಟ್ಟು 32 ಪ್ರಕರಣ ದಾಖಲಿಸಿ 2 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಎಂಬ ಫಲಕ ಹಾಕಲು ತಿಳಿಸಲಾಯಿತು. ಸಿಗರೇಟ್, ಬೀಡಿ ಬಿಡಿ ಬಿಡಿಯಾಗಿ ಮಾರಾಟ ಮಾಡಬಾರದು. ತಂಬಾಕು ಉತ್ಪನ್ನಗಳ ಬಗ್ಗೆ ಗೋಡೆ ಬರಹ, ಹೋರ್ಡಿಂಗ್ಸ್, ಮುದ್ರಣ ಮಾಧ್ಯಮದ ಮೂಲಕ ಜಾಹೀರಾತು ನೀಡಬಾರದೆಂದು ಕರಪತ್ರದ ಮೂಲಕ ತಿಳಿಹೇಳಿದರು.
ಸೆಕ್ಷನ್ 6 (ಬಿ) ಕಾಯ್ದೆ ಅನುಸಾರ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಉಲ್ಲಂಘನೆಯಾದರೆ ದಂಡ ಹಾಗೂ ಸೆರೆ ವಾಸ ಶಿಕ್ಷೆ ವಿಧಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದರು.