ಬಾಗಲಕೋಟೆ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗುತ್ತಿರುವ ಪರಿಣಾಮ, ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗಿ ಪ್ರವಾಹ ಭೀತಿ ಎದುರಾಗಿದೆ. ಜಿಲ್ಲೆಯ ರಬಕವಿ-ಬನಹಟ್ಟಿ ಸಮೀಪದಲ್ಲಿ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದ ಸಮೀಪದ ರಬಕವಿ-ಮಹೇಷವಾಡಗಿ ಸೇತುವೆ ಮುಳುಗಡೆ ಆಗಿದೆ.
ಪರಿಣಾಮ ಸಂಚಾರಕ್ಕೆ ಮತ್ತೆ ತೊಂದರೆ ಉಂಟಾಗಿದ್ದು, ವಾಹನ ಸವಾರರಿಗೆ ಸುತ್ತುವರೆದು ಸಂಚರಿಸುವುದು ಅನಿವಾರ್ಯವಾಗಿದೆ. ನೀರಿನ ಹರಿವು ಹೆಚ್ಚಿದ್ದರಿಂದ ಅಥಣಿ ತಾಲೂಕಿನ ವಿವಿಧ ಗ್ರಾಮಗಳ ಬೋಟ್ ಸೇವೆ ಬಂದ್ ಮಾಡಲಾಗಿದೆ.
ಈ ಮಧ್ಯೆ ಜಮಖಂಡಿ ತಾಲೂಕಿನಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ತುಂಗಳ ಗ್ರಾಮದಲ್ಲಿ ಮನೆಗಳು ಕುಸಿದು ಹಾನಿಯಾಗಿದೆ. ಬಳಿಕ ಸ್ಥಳಕ್ಕೆ ಶಾಸಕ ಆನಂದ ನ್ಯಾಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆ ಕಳೆದುಕೊಂಡಿರುವ ಕುಟುಂಬಗಳಿಗೆ ಸೂಕ್ತ ಆಶ್ರಯ ಕಲ್ಪಿಸಲು ಅಧಿಕಾರಿಗಳು ಶಾಸಕ ಆನಂದ ನ್ಯಾಮಗೌಡ ಸೂಚನೆ ನೀಡಿದ್ದಾರೆ.